ಮುಂಬೈ: ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್ ಮತ್ತು ಸಾರ್ವಕಾಲಿಕ ಗರಿಷ್ಠ ಬೆಲೆಗಳ ಏರಿಕೆಯಿಂದಾಗಿ ಭಾರತದ ಚಿನ್ನದ ಬೇಡಿಕೆಯು 2020ರಲ್ಲಿ ಮೂರನೇ ಒಂದು ಭಾಗದಷ್ಟು ಇಳಿದು 446.4 ಟನ್‌ಗೆ ಕುಸಿದಿದೆ.
ಈ ಕ್ಯಾಲೆಂಡರ್ ವರ್ಷದಲ್ಲಿ ಬಂಗಾರ ಮಾರಾಟ ಮತ್ತೆ ಮರುಕಳಿಸಲಿದೆ. ಸಾಮಾನ್ಯ ಸ್ಥಿತಿಗೆ ಮರಳುವ ಆದಾಯ ಮತ್ತು ಸುಧಾರಣೆಗಳ ಕ್ರಮವು ಚಿನ್ನದ ಉದ್ಯಮವನ್ನು ಬಲಪಡಿಸುತ್ತದೆ ಎಂದು ವಿಶ್ವ ಗೋಲ್ಡ್ ಕೌನ್ಸಿಲ್ (ಡಬ್ಲ್ಯುಜಿಸಿ) ಹೇಳಿದೆ.
2020ರಲ್ಲಿ ಭಾರತದ ಚಿನ್ನದ ಬೇಡಿಕೆ ಶೇ 35.34ರಷ್ಟು ಇಳಿದು 446.4 ಟನ್‌ಗೆ ತಲುಪಿದೆ. 2019ರಲ್ಲಿ ಒಟ್ಟು ಚಿನ್ನದ ಬೇಡಿಕೆ 690.4 ಟನ್ಷ್ಟಿತ್ತು ಎಂದು ಡಬ್ಲ್ಯುಜಿಸಿಯ 2020ರ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿಯಲ್ಲಿ ತಿಳಿಸಿದೆ.
ಡಬ್ಲ್ಯುಜಿಸಿ ಅಂಕಿ-ಅಂಶಗಳ ಪ್ರಕಾರ, 2020 ರಲ್ಲಿ ಚಿನ್ನದ ಬೇಡಿಕೆಯು ಮೌಲ್ಯದಲ್ಲಿ ಶೇ14ರಷ್ಟು ಕುಸಿತವಾಗಿ 1,88,280 ಕೋಟಿ ರೂ.ಗಳಷ್ಟಾಗಿದೆ. 2019ರಲ್ಲಿ ಇದು 2,17,770 ಕೋಟಿ ರೂ.ಯಷ್ಟಿತ್ತು.
ಇದನ್ನೂ ಓದಿ: ಜಸ್ಟ್ 4 ವರ್ಷದಲ್ಲಿ ಜಗತ್ತಿನ 5ನೇ ಬಲಿಷ್ಠ ಬ್ರ್ಯಾಂಡ್ ಅಂಬಾನಿಯ 'ಜಿಯೋ': ಈ ಸ್ಥಾನಕ್ಕೇರಿದ್ದು ಹೇಗೆ?
2020ರಲ್ಲಿ ಒಟ್ಟು ಆಭರಣಗಳ ಬೇಡಿಕೆ 2019ರಲ್ಲಿ 544.6 ಟನ್‌ಗೆ ಹೋಲಿಸಿದರೆ ಶೇ 42ರಷ್ಟು ಇಳಿಕೆಯಾಗಿ 315.9 ಟನ್‌ಗೆ ತಲುಪಿದೆ. ಆದರೆ ಮೌಲ್ಯದ ದೃಷ್ಟಿಯಿಂದ ಇದು ಶೇ 22.42ರಷ್ಟು ಇಳಿದು 1,33,260 ಕೋಟಿ ರೂ.ಗೆ ತಲುಪಿದೆ. ಈ ಹಿಂದಿನ ವರ್ಷ 71,790 ಕೋಟಿ ರೂ.ಯಷ್ಟು ಇದ್ದದ್ದು ಕೋವಿಡ್ ಕಾರಣದಿಂದ ಕ್ಷೀಣಿಸಿದೆ.
ದೇಶದ ನಿವ್ವಳ ಚಿನ್ನದ ಆಮದು 2020ರಲ್ಲಿ ಶೇ 47ರಷ್ಟು ಇಳಿಕೆಯಾಗಿದ್ದು, 2019ರಲ್ಲಿ 646.8 ಟನ್‌ಗೆ ಹೋಲಿಸಿದರೆ 344.2 ಟನ್‌ಗಳಿಗೆ ತಲುಪಿದೆ.