ನವದೆಹಲಿ: ಭಾರತೀಯರಿಗೆ ಚಿನ್ನಾಭರಣಗಳೆಂದರೆ ಎಲ್ಲಿಲ್ಲದ ವ್ಯಾಮೋಹ. ಒಂದು ಕಡೆ ಚಿನ್ನದ ಬೆಲೆ ಕೈಗೆ ಸಿಗದಷ್ಟು ಎತ್ತರಕ್ಕೆ ಜಿಗಿದರೆ ಇನ್ನೊಂದೆಡೆ ಹೂಡಿಕೆದಾರರನ್ನು ಕೈ ಬೀಸಿ ಕರೆಯುತ್ತಿದೆ.
ಸಾರ್ವಕಾಲಿಕ ದರ ಏರಿಕೆ:
ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಪ್ರತೀ ಹತ್ತು ಗ್ರಾಂ. ಚಿನ್ನದ ದರ 40 ಸಾವಿರ ರೂ. ದಾಟಿದೆ. ಚಿನಿವಾರ ಪೇಟೆಯಲ್ಲೇ ಇದುವರೆಗೂ ದಾಖಲಾದ ಸಾರ್ವತ್ರಿಕ ಗರಿಷ್ಠ ದರವಿದು. ಕಳೆದೆರಡು ವರ್ಷಗಳಲ್ಲಿ ಹಳದಿ ಲೋಹದ ಬೆಳವಣಿಗೆಯ ದರ ಶೇ 14ರಷ್ಟು ಹೆಚ್ಚಳವಾಗಿದ್ದರೆ 10 ವರ್ಷದಲ್ಲಿ ಶೇ 9.5ರಷ್ಟು ಜಿಗಿದಿದೆ.
ಬೆಲೆ ಏರಿಕೆಗೆ ಕಾರಣ ಏನು?
ಬೆಲೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯ ನಡುವೆ ಚಿನ್ನದ ಬೆಲೆ ಏರಿಕೆ ಆಗುತ್ತಲೇ ಸಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಏರಿಕೆ ರಾಷ್ಟ್ರದ ಮಾರುಕಟ್ಟೆಯಲ್ಲೂ ಪ್ರತಿಫಲಿಸುತ್ತಿದೆ. ಜಾಗತಿಕ ಪೇಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,528 ಡಾಲರ್ ತಲುಪಿದೆ. ಒಂದು ತಿಂಗಳಿಂದ ಗಗನ ಮುಖಿಯಾಗುತ್ತಿರುವ ಚಿನ್ನ ಭೂಮಿಯತ್ತ ನೋಡುತ್ತಿಲ್ಲ.
ಲಾಭ ನಷ್ಟದ ಲೆಕ್ಕಾಚಾರ:
ಬಂಗಾರ ದರ ಅಂಬರಕ್ಕೇರಿದ್ದರಿಂದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಖರೀದಿಸುತ್ತಿದ್ದಾರೆ. ಕೆಲವರು ಕೈಯ್ಯಲ್ಲಿರುವ ಚಿನ್ನ ಮಾರಾಟ ಮಾಡಿ ಕೈತುಂಬಾ ಹಣ ಮಾಡುತ್ತಿದ್ದಾರೆ. ಮುಂಬರುವ ವಿವಾಹ ಸೀಸನ್‌ನಲ್ಲಿ ಜುವೆಲ್ಲರಿಗಳಿಗೆ ನಿರೀಕ್ಷೆ ಇದ್ದರೂ ಪ್ರತಿ ದಿನ ಬೆಲೆ ಹೆಚ್ಚುತ್ತಿರುವುದರಿಂದ ಜುವೆಲ್ಲರಿ ಪೇಟೆಯಲ್ಲಿ ಆತಂಕ ಉಂಟಾಗಿದೆ. ಅತ್ಯಗತ್ಯ ಸಂದರ್ಭಗಳಲ್ಲಿ ಮಾತ್ರ ಜನರು ಚಿನ್ನ ಖರೀದಿಸಲು ಬರುತ್ತಾರೆ ಎಂದು ವ್ಯಾಪಾರಿಯೊಬ್ಬರು ಅಲವತ್ತುಕೊಂಡರು.
ಹೆಚ್ಚಿದ ದರ, ಕೂಲಿ, ಜಿಎಸ್‌ಟಿ ಗ್ರಾಹಕರನ್ನು ಹಿಂಜರಿಯುವಂತೆ ಮಾಡುತ್ತಿದೆ. ವಿವಾಹಕ್ಕೆ ಚಿನ್ನ ಕಡಿಮೆ ಮಾಡಿ ಸಮಸ್ಯೆ ಬಗೆಹರಿಸಬಹುದು. ಹಬ್ಬದ ಸೀಸನ್‌ನಲ್ಲಿ ಮೇಕಿಂಗ್ ವೆಚ್ಚವನ್ನು ಕಡಿಮೆ ಮಾಡಿ ಗ್ರಾಹಕರಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಿ ಹೆಚ್ಚಿನ ಮಂದಿಯನ್ನು ಜುವೆಲ್ಲರಿಗಳತ್ತ ಆಕರ್ಷಿಸುವ ಕೆಲಸವನ್ನು ಮಾಲೀಕರು ಮಾಡುತ್ತಿದ್ದಾರೆ.