ನವದೆಹಲಿ: ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಸೋಮವಾರ ಸತತ ನಾಲ್ಕನೇ ದಿನವೂ ಏರುಗತಿಯಲ್ಲಿ ಮುಂದುವರಿದಿದೆ. ಈ ವರ್ಷದ ಕೊನೆಯಲ್ಲಿ ಅದು ಹೊಸ ಗರಿಷ್ಠ ಮಟ್ಟ ಮುಟ್ಟಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.
ಕೊರೊನಾ ಬಿಕ್ಕಟ್ಟಿನಿಂದ ಉಂಟಾಗುವ ಅನಿಶ್ಚಿತತೆಯಿಂದಾಗಿ ಮುಂಬರುವ ಹಬ್ಬದ ಋತುವಿನಲ್ಲಿ ಹಳದಿ ಲೋಹದ ಬೇಡಿಕೆ ಹೆಚ್ಚಿಲ್ಲದೆ ಇರಬಹುದು. ಆದರೆ, ಹೂಡಿಕೆದಾರರಿಗೆ ಚಿನ್ನದ ಮೇಲಿನ ಆಸಕ್ತಿ ಕುಂದುವುದಿಲ್ಲ. ದೀಪಾವಳಿಯಿಂದ 10 ಗ್ರಾಂ. ಚಿನ್ನದ ಬೆಲೆಯು 52,000 ರೂ. ದಾಟಲಿದೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ವಾರ ಜುಲೈ 1ರಂದು ದೇಶಿಯ ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನವು 10 ಗ್ರಾಂ.ಗೆ 48,982 ರೂ.ಗೆ ಏರಿದೆ. ಇದು ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ನಲ್ಲಿ (ಎಂಸಿಎಕ್ಸ್) ಇದುವರೆಗಿನ ದಾಖಲೆಯ ಮಟ್ಟದಲ್ಲಿದ್ದು, ದೇಶಿಯ ಸ್ಪಾಟ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50,000 ರೂ. ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದೇ ಸಮಯದಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2,000 ಡಾಲರ್ ವರೆಗೆ ಹೋಗಬಹುದು ಎಂದು ಊಹಿಸಲಾಗಿದೆ. ಕಳೆದ ವಾರ ಜುಲೈ 1ರಂದು ಚಿನ್ನವು ಪ್ರತಿ ಔನ್ಸ್‌ಗೆ 1,807.70 ಡಾಲರ್ಗೆ ಏರಿತ್ತು. ಇದು 2011ರ ಸೆಪ್ಟೆಂಬರ್ 21ರಿಂದ ಪ್ರತಿ ಔನ್ಸ್‌ಗೆ 1,812 ಡಾಲರ್ ಆಗಿದ್ದರೆ, 2011ರ ಸೆಪ್ಟೆಂಬರ್ 6ರಂದು ಚಿನ್ನದ ಬೆಲೆ ದಾಖಲೆಯ 1911.60 ಡಾಲರ್ಗೆ ತಲುಪಿತ್ತು.
ಪ್ರಸ್ತುತ ಅವಧಿಯಲ್ಲಿ ಚಿನ್ನದ ಎಲ್ಲಾ ಮೂಲಭೂತ ಅಂಶಗಳು ಪ್ರಬಲವಾಗಿವೆ. ಸ್ಪಾಟ್ ಬೇಡಿಕೆಯೂ ಸದೃಢವಾಗಿದೆ. ಇದರಿಂದಾಗಿ ಹಳದಿ ಲೋಹದ ಬೆಲೆ ದೀಪಾವಳಿ ತನಕ ಎಂಸಿಎಕ್ಸ್‌ನಲ್ಲಿ 10 ಗ್ರಾಂ.ಗೆ 52,000 ರೂ. ತನಕ ಮುಟ್ಟಬಹುದು. ಕಾಮೆಕ್ಸ್‌ನಲ್ಲಿ ಅದು ಔನ್ಸ್‌ಗೆ 2,000 ಡಾಲರ್ವರೆಗೆ ಹೋಗಬಹುದು ಎಂದು ಕೆಡಿಯಾ ಕಮೊಡಿಟಿಯ ನಿರ್ದೇಶಕ ಅಜಯ್ ಕೆಡಿಯಾ ಅವರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.