ಲಖನೌ : ಸುಮಾರು 15 ಲಕ್ಷ ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ಒಂದು ತಿಂಗಳ ಬೋನಸ್ ನೀಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಗೆಜೆಟೆಡ್ ಅಲ್ಲದ ಎಲ್ಲಾ ರಾಜ್ಯ ನೌಕರರು, ಸರ್ಕಾರಿ ನೆರವಿನ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳ ಮತ್ತು ಜಿಲ್ಲಾ ಪಂಚಾಯತ್‌ಗಳ ಹಾಗೂ ದಿನಗೂಲಿಗಳು 30 ದಿನಗಳ ಬೋನಸ್ ಅನ್ನು ದೀಪಾವಳಿ ಉಡುಗೊರೆಯಾಗಿ ಪಡೆಯಲಿದ್ದಾರೆ.
ಮಾನದಂಡಗಳ ಪ್ರಕಾರ, ಗರಿಷ್ಠವಾಗಿ ನಿಗದಿಪಡಿಸಿದ ಬೋನಸ್ ಪ್ರತಿ ಉದ್ಯೋಗಿಯು 6,908 ರೂ. ಪಡೆಯಲಿದ್ದಾರೆ. ಶೇ.25ರಷ್ಟು ಬೋನಸ್ ಹಣ ನಗದು ರೂಪದಲ್ಲಿ ನೀಡಿದ್ದರೇ, ಶೇ.75ರಷ್ಟು ಹಣ ಭವಿಷ್ಯ ನಿಧಿಗೆ (ಪಿಎಫ್) ಸೇರಿಸಲಾಗುತ್ತದೆ. ಪಿಎಫ್ ಖಾತೆ ಇಲ್ಲದವರಿಗೆ ಅದೇ ಮೊತ್ತಕ್ಕೆ ರಾಷ್ಟ್ರೀಯ ಭದ್ರತಾ ಪ್ರಮಾಣಪತ್ರ ನೀಡಲಾಗುವುದು.
ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 1,023 ಕೋಟಿ ರೂ. ಹೊರೆಯಾಗಲಿದೆ. 2020ರ ಮಾರ್ಚ್ 31ರ ನಂತರ ನಿವೃತ್ತರಾದ ಅಥವಾ ಮುಂದಿನ ವರ್ಷ ಏಪ್ರಿಲ್ 30ರೊಳಗೆ ನಿವೃತ್ತಿ ಹೊಂದಲಿರುವ ನೌಕರರು ಪೂರ್ಣ ಪ್ರಮಾಣದ ಅರ್ಹ ತಾತ್ಕಾಲಿಕ ಬೋನಸ್ ಸ್ವೀಕರಿಸುತ್ತಾರೆ.
ತಮಿಳುನಾಡು ಸರ್ಕಾರ ಸಹ ರಾಜ್ಯದ 2.91 ಲಕ್ಷ ಉದ್ಯೋಗಿಗಳಿಗೆ 210.48 ಕೋಟಿ ರೂ. ದೀಪಾವಳಿ ಬೋನಸ್ ಘೋಷಿಸಿದೆ. ಗ್ರೂಪ್ 'ಸಿ' ಮತ್ತು 'ಡಿ' ವರ್ಗದ ಕಾರ್ಮಿಕರು ಹಾಗೂ ಸಾರ್ವಜನಿಕ ವಲಯದ ಕೆಲಸ ಮಾಡುವ ನೌಕರರಿಗೆ ಶೇ.8.33ರಷ್ಟು ಬೋನಸ್ ಮತ್ತು 1.67ರಷ್ಟು ಎಕ್ಸ್ ಗ್ರೇಷಿಯಾ ಪಾವತಿ ನೀಡುವುದಾಗಿ ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿತ್ತು.