ನವದೆಹಲಿ:ಹಲವು ಕ್ಷೇತ್ರಗಳಲ್ಲಿನ ಬಹುದೊಡ್ಡ ಸಾಧನೆಗಳೊಂದಿಗೆ ವಿಶ್ವದ ಗಮನ ಸೆಳೆಯುತ್ತಿರುವ ಭಾರತ ಇನ್ನೂ ಕೆಲವೇ ವರ್ಷಗಳಲ್ಲಿ ಜಗತ್ತಿನ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ನಂಬರ್- 2 ಸ್ಥಾನ ಪಡೆಯಲಿದೆ.
2030ರ ಹೊತ್ತಿಗೆ ಯುವ ಸಮುದಾಯ ಮತ್ತು ಸೂಪರ್ ಡೈನಾಮಿಕ್ ಆರ್ಥಿಕ ಬೆಳವಣಿಗೆಯು ಅಭಿವೃದ್ಧಿಶೀಲ ರಾಷ್ಟ್ರಗಳು ಉನ್ನತ ಸ್ಥಾನಕ್ಕೆ ಏರಲಿವೆ. ಜಿಡಿಪಿ ಆಧಾರಿತ 'ಖರೀದಿ ಶಕ್ತಿಯ ಬೆಳವಣಿಗೆ'(ಪರ್ಚೆಸಿಂಗ್ ಪವರ್ ಪಾರಿಟಿ: ಪಿಪಿಪಿ) ದರದಲ್ಲಿ ವಿಶ್ವದ ಅಗ್ರ 10 ಶ್ರೀಮಂತ ರಾಷ್ಟ್ರಗಳಲ್ಲಿ ನಾಟಕೀಯ ಬದಲಾವಣೆಗಳು ಕಂಡು ಬರಲಿದೆ ಎಂದು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ ತಿಳಿಸಿದೆ.
4.5 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಪ್ರಸ್ತುತ 5ನೇ ಸ್ಥಾನದಲ್ಲಿರುವ ಜರ್ಮನಿ 2030ರ ವೇಳೆಗೆ 6.9 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ 10ನೇ ಸ್ಥಾನದಲ್ಲಿ ಇರಲಿದೆ. ಜಪಾನ್ ಈಗ 5.8 ಟ್ರಿಲಿಯನ್ ಡಾಲರ್ ಮುಖೇನ 4ನೇ ಸ್ಥಾನದಲ್ಲಿದ್ದು, ಮುಂದಿನ 11 ವರ್ಷದಲ್ಲಿ 9ನೇ ಸ್ಥಾನದಲ್ಲಿ ಇರಲಿದೆ.
6ನೇ ಸ್ಥಾನದಲ್ಲಿರುವ ರಷ್ಯಾ 7.9 ಟ್ರಿಲಿಯನ್ ಡಾಲರ್ ಮೂಲಕ 8ನೇ ಸ್ಥಾನಕ್ಕೆ ಇಳಿಯಲಿದೆ. 20ನೇ ಸ್ಥಾನದಲ್ಲಿರುವ ಈಜಿಪ್ತ್ 7ನೇ ಸ್ಥಾನಕ್ಕೆ ಬರಲಿದೆ. 8ನೇ ಸ್ಥಾನದಲ್ಲಿರುವ ಬ್ರೆಜಿಲ್ 6ನೇ ಸ್ಥಾನಕ್ಕೆ ಬಡ್ತಿ ಪಡೆಯಲಿದೆ. 13ನೇ ಸ್ಥಾನದಲ್ಲಿರುವ ಟರ್ಕಿ 5ನೇ ಸ್ಥಾನಕ್ಕೆ ಲಗ್ಗೆ ಇಡಲಿದೆ. 7ನೇ ಸ್ಥಾನದಲ್ಲಿರುವ ಇಂಡೋನೆಷ್ಯಾ 4ನೇ ಶ್ರೇಯಾಂಕದಲ್ಲಿ ಮುಂದುವರಿಯಲಿದೆ. 21.3 ಟ್ರಿಲಿಯನ್ಯೊಂದಿಗೆ 2ನೇ ಸ್ಥಾನದಲ್ಲಿರುವ ಅಮೆರಿಕ, 31 ಟ್ರಿಲಿಯನ್ ಡಾಲರ್ ಆರ್ಥಿಕತೆಯೊಂದಿಗೆ 3ನೇ ಸ್ಥಾನಕ್ಕೆ ಬರಲಿದೆ.
ಭಾರತದ ಜಿಡಿಪಿ ಬೆಳವಣಿಗೆ ದರ 2020ರಲ್ಲಿ ಶೇ 7.2ರಷ್ಟು ಇರುವ ನಿರೀಕ್ಷೆ ಇದೆ. 2030ರ ಅಂತ್ಯದ ವೇಳೆಗೆ ಜಿಡಿಪಿಯು (ಪಿಪಿಪಿ) 46.3 ಟ್ರಿಲಿಯನ್ ಡಾಲರ್ ಆಗಲಿದೆ. ಈ ಮೂಲಕ ವಿಶ್ವದ ಎರಡನೇ ಶ್ರೀಮಂತ ರಾಷ್ಟ್ರ ಎನಿಸಿಕೊಳ್ಳಲಿದೆ. ಇದೇ ಅವಧಿಯಲ್ಲಿ ಚೀನಾ ವಿಶ್ವದ ನಂಬರ್-1 ಶ್ರೀಮಂತ ರಾಷ್ಟ್ರ ಆಗಲಿದ್ದು, ಅದರ ಒಟ್ಟು ಜಿಡಿಪಿಯು 64.2 ಟ್ರಿಲಿಯನ್ ಡಾಲರ್ನಷ್ಟು ಇರಲಿದೆ ಎಂದು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ ಅಂದಾಜಿಸಲಾಗಿದೆ.