ನವದೆಹಲಿ: ನೂತನ ನೇರ ತೆರಿಗೆ ಸಂಹಿತೆ (ಡಿಟಿಸಿ) ತಯಾರಿಸಲಾದ ಕಾರ್ಯಪಡೆ ತೆರಿಗೆ ವರದಿಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಪಡೆಯ ಸಂಚಾಲಕ ಅಖಿಲೇಶ್ ರಂಜನ್ ನೇತೃತ್ವದ ತಂಡ ಸಲ್ಲಿಸಿದೆ.
60 ವರ್ಷಗಳ ಹಳೆಯ ಟ್ಯಾಕ್ಸ್ ಪದ್ಧತಿಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರವು ಅಖಿಲೇಶ್ ರಂಜನ್ ನೇತೃತ್ವದಲ್ಲಿ ನೇರ ತೆರಿಗೆ ಸಂಹಿತೆ ಕಾರ್ಯಪಡೆಯು ತನ್ನ ದೂರಗಾಮಿ ಪರಿಣಾಮ ಬೀರಬಹುದಾದ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ಪ್ರಸ್ತುತ ಜಾರಿಯಲ್ಲಿರುವ ತೆರಿಗೆ ಸ್ವರೂಪದಲ್ಲಿ ಹಲವು ಬದಲಾವಣೆಗಳನ್ನು ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಯಲ್ಲಿರುವ ನಿಯಮಗಳಿಗೆ ಅನುಗುಣವಾಗಿ ವರದಿ ಸಿದ್ಧಗೊಂಡಿದೆ.
ಒಂದು ವೇಳೆ ವರದಿಯಲ್ಲಿ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡು ಯಥಾವತ್ತಾಗಿ ಜಾರಿಗೆ ತಂದಿದ್ದೆ ಆದಲ್ಲಿ ವೈಯಕ್ತಿಕ ಆದಾಯ ತೆರಿಗೆ ದರಗಳು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲಿವೆ. ಆದಾಯದ ಮೇಲಿನ ಸರ್ಚಾರ್ಜ್ ಕೂಡ ರದ್ದಾಗಲಿದೆ. ಕಂಪನಿಗಳು ತಮ್ಮ ಆದಾಯ ಮೇಲೆ ಸಲ್ಲಿಸುವ ತೆರಿಗೆ ಸಹ ಇಲ್ಲವಾಗಲಿದೆ ಎಂದು ಹೇಳಲಾಗುತ್ತಿದೆ.
ವರದಿ ಎರಡು ಸಂಪುಟಗಳಲ್ಲಿ ಸಲ್ಲಿಕೆಯಾಗಿದ್ದು, ತೆರಿಗೆ ದರ ತಗ್ಗಿಸುವ, ತೆರಿಗೆ ಹಂತಗಳ ಸರಳೀಕರಣ, ಸುಲಭ ತೆರಿಗೆ ಸಲ್ಲಿಕೆ ಪ್ರಕ್ರಿಯೆ, ತೆರಿಗೆ ವ್ಯಾಜ್ಯಗಳ ಸಂಖ್ಯೆ ಕಡಿಮೆ, ಆದಾಯದ ಮೇಲಿನ ತೆರಿಗೆ ಕಡಿಮೆ, ದೇಶಿಯ ಮತ್ತು ವಿದೇಶಿಯ ಸಾಂಸ್ಥಿಕ ಕಂಪನಿಗಳ ಮೇಲೆ ವಿಧಿಸುತ್ತಿರುವ ಶೇ.30ರಷ್ಟು ತೆರಿಗೆ ಇಳಿಕೆ ಸೇರಿದಂತೆ ಹಲವು ಶಿಫಾರಸುಗಳು ವರದಿಯಲ್ಲಿವೆ.