ಮುಂಬೈ: ಐದು ದಿನಗಳ ನಿರಂತರ ಓಟದ ಬಳಿಕ ಇಂದು ಮುಂಬೈ ಷೇರುಪೇಟೆಯಲ್ಲಿ ಗೂಳಿಯ ರಣೋತ್ಸಾಹಕ್ಕೆ ಕರಡಿ ಅಡ್ಡಿಯಾಗಿ ನಿಂತಿದೆ.
ದಿನದ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ಇಳಿಕೆ ಕಂಡಿವೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 102 ಅಂಕಗಳ ಇಳಿಕೆಯ ನಂತರ 47,510ರಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ ಕೂಡ 27 ಅಂಕಗಳ ಕುಸಿತದೊಂದಿಗೆ 13,943ರಲ್ಲಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್ ಇಂಡ್ ಬ್ಯಾಂಕ್, ಆಕ್ಸೀಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ತಮ್ಮ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡಿತು. ಹೆಚ್‌ಡಿಎಫ್‌ಸಿ, ರಿಲಯನ್ಸ್, ಭಾರ್ತಿ ಏರ್ಟೆಲ್, ಲಾರ್ಸೆನ್ ಅಂಡ್ ಟರ್ಬೊ ಹಾಗೂ ಸನ್ ಫಾರ್ಮ್ ಷೇರುಗಳ ಮೌಲ್ಯ ಕುಸಿದಿದೆ.
ನಿನ್ನೆಯಷ್ಟೇ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದವು. ಗೂಳಿಯ ಐದು ದಿನಗಳ ನಿರಂತರ ಓಟದ ಪರಿಣಾಮವಾಗಿ ಬ್ಯಾಂಕಿಂಗ್ ಹಾಗೂ ಐಟಿ ಹಿಂದಿನ ನಷ್ಟವನ್ನು ತುಂಬಿಕೊಂಡಿದ್ದವು.
ಸದ್ಯ 72 ಅಂಕಗಳ ಇಳಿಕೆಯೊಂದಿಗೆ ಸೆನ್ಸೆಕ್ಸ್ 47,458ರಲ್ಲಿ ಹಾಗೂ 10 ಅಂಕಗಳ ಕುಸಿತದೊಂದಿಗೆ 13,891ರಲ್ಲಿ ನಿಫ್ಟಿ ವಹಿವಾಟು ಮುಂದುವರಿಸಿವೆ.