ಮುಂಬೈ: ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ದ್ರವ್ಯತೆ (ನಗದು) ಪ್ರಮಾಣ ಹೆಚ್ಚಿಸಲು ಹಾಗೂ ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ವೃದ್ಧಿಸುವ ಉದ್ದೇಶದಿಂದ ಮುಕ್ತ ಮಾರುಕಟ್ಟೆ ಮೂಲಕ 10,000 ಕೋಟಿ ರೂ. ಮೌಲ್ಯದ ಸರ್ಕಾರಿ ಭದ್ರತೆಗಳನ್ನು ( ಗವರ್ನಮೆಂಟ್ ಸೆಕ್ಯೂರಿಟೀಸ್) ಖರೀದಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಘೋಷಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಅಪಾಯ ಹೆಚ್ಚಾಗಿದ್ದರಿಂದ ಕೆಲವು ಹಣಕಾಸು ಮಾರುಕಟ್ಟೆಯ ವಿಭಾಗಗಳು ಇಳಿಮುಖವಾಗಿವೆ. ಮಾರುಕಟ್ಟೆಗಳು ವಿಸ್ತರಣೆ ಆಗದೇ ಹಣಕಾಸಿನ ಪರಿಸ್ಥಿತಿಗಳು ಇನ್ನಷ್ಟು ಬಿಗಿಯಾಗುತ್ತಿವೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲ ಮಾರುಕಟ್ಟೆ ವಿಭಾಗಗಳ ದ್ರವ್ಯತೆ ಸ್ಥಿರವಾಗಿರುತ್ತವೆ ಮತ್ತು ಈ ಹಿಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳುವುದು ಈಗ ಬಹಳ ಮುಖ್ಯವಾಗಿದೆ ಎಂದಿದೆ.
ಪ್ರಸ್ತುತ ದ್ರವ್ಯತೆ ಮತ್ತು ಹಣಕಾಸಿನ ಸ್ಥಿತಿಗತಿಗಳ ಪರಿಶೀಲನೆಯ ಮೇರೆಗೆ ರಿಸರ್ವ್ ಬ್ಯಾಂಕ್ 2020ರ ಮಾರ್ಚ್ 20ರಂದು (ಶುಕ್ರವಾರ) ಮುಕ್ತ ಮಾರುಕಟ್ಟೆ ವಹಿವಾಟುಗಳನ್ನು ನಡೆಸಲು ನಿರ್ಧರಿಸಿದೆ. ಸರ್ಕಾರಿ ಭದ್ರತೆಗಳ ಒಟ್ಟಾರೆ 10,000 ಕೋಟಿ ರೂ. ಮೊತ್ತದಲ್ಲಿ ಖರೀದಿಸಲಿದೆ.
ಈ ಯೋಜನೆಯಡಿಯಲ್ಲಿ ಆರ್‌ಬಿಐ 2022 ಮತ್ತು 2025ರ ನಡುವೆ ಸರ್ಕಾರಿ ಭದ್ರತೆಗಳನ್ನು ಖರೀದಿಸುತ್ತದೆ. ಸೆಕ್ಯುರಿಟಿಗಳ ಕೂಪನ್ ದರವು ಶೇ 8.2, 7.37, 7.32 ಮತ್ತು 7.72ರಷ್ಟು ನೀಡಲಾಗುತ್ತದೆ. ವೈಯಕ್ತಿಕ ಭದ್ರತೆಗಳ ಖರೀದಿಯ ಪ್ರಮಾಣವನ್ನು ನಿರ್ಧರಿಸುವ ಒಟ್ಟು 10,000 ಕೋಟಿ ರೂ.ಗಿಂತ ಕಡಿಮೆ ಅಥವಾ ಹೆಚ್ಚಿನ ಕೊಡುಗೆಗಳನ್ನು ಸ್ವೀಕರಿಸುವ ಹಕ್ಕನ್ನು ಕೇಂದ್ರ ಬ್ಯಾಂಕ್ ಹೊಂದಿದೆ ಎಂದು ಹೇಳಿದೆ.
ಕೊರೊನಾ ವೈರಸ್ ಭಯವು ವಿಶ್ವದಾದ್ಯಂತ ಹಣಕಾಸು ಮಾರುಕಟ್ಟೆಗಳನ್ನು ತಲ್ಲಣಗೊಳಿಸಿದೆ. ಸಾಂಕ್ರಾಮಿಕ ರೋಗವು ಆರ್ಥಿಕತೆಯ ಬೆಳವಣಿಗೆಗೆ ಅಡ್ಡಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಆರ್‌ಬಿಐ ಸೋಮವಾರ ಭರವಸೆ ನೀಡಿತ್ತು.