ನವದೆಹಲಿ: ಕುಸಿದ ದೇಶದ ಆರ್ಥಿಕತೆಯ ಮೇಲೆ ಕೋವಿಡ್-19 ಸಾಂಕ್ರಾಮಿಕವು ಬೀರಿದ ಪರಿಣಾಮ ನಿರ್ಣಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹಣಕಾಸು ಮತ್ತು ವಾಣಿಜ್ಯ ಸಚಿವಾಲಯಗಳ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗ್ರಾಹಕರ ಬೇಡಿಕೆ ಕುಸಿಯುತ್ತಿರುವ ಕಾರಣ ಇತ್ತೀಚಿನ ತ್ರೈಮಾಸಿಕಗಳಲ್ಲಿ ಕ್ಷೀಣಿಸಿರುವ ಆರ್ಥಿಕತೆಯ ತ್ವರಿತ ಚೇತರಿಕೆಗೆ ಪ್ರಧಾನಿ ಅವರು ಗಮನ ಹರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಒಂದೂವರೆ ಗಂಟೆಗಳ ನಿಗದಿತ ಸಭೆಯಲ್ಲಿ ಹಣಕಾಸು ಮತ್ತು ವಾಣಿಜ್ಯ ಸಚಿವಾಲಯಗಳ ಅಧಿಕಾರಿಗಳು ಪರಿಸ್ಥಿತಿ ಕುರಿತು ಮಾಹಿತಿ ನೀಡಲಿದ್ದಾರೆ.
ಮೂಲಗಳ ಪ್ರಕಾರ, ಪ್ರಧಾನಿ ಅವರು ಉನ್ನತ 50 ಅಧಿಕಾರಿಗಳಿಂದ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಅವರು ಆರ್ಥಿಕ ಸಲಹಾ ಮಂಡಳಿ, ಹಣಕಾಸು ಸಚಿವಾಲಯದ ಮುಖ್ಯ ಮತ್ತು ಪ್ರಧಾನ ಆರ್ಥಿಕ ಸಲಹೆಗಾರ ಮತ್ತು ನೀತಿ ಆಯೋಗದ ಜತೆ ಮೂರು ಪ್ರತ್ಯೇಕ ಸಭೆಗಳನ್ನು ನಡೆಸಿದರು.
ಕೊರೊನಾ ವೈರಸ್ ಬಿಕ್ಕಟ್ಟು ಎದುರಿಸಲು, ವ್ಯವಹಾರಗಳ ರಕ್ಷಣೆಗೆ ಮತ್ತು ಆರ್ಥಿಕ ಪುನರುಜ್ಜೀವನಕ್ಕಾಗಿ 20.97 ಲಕ್ಷ ಕೋಟಿ ರೂ. ಮೌಲ್ಯದ ವಿಶ್ವದ ಅತಿದೊಡ್ಡ ಉತ್ತೇಜಕ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಘೋಷಿಸಿತ್ತು.