ನವದೆಹಲಿ: ಡಿಜಿಟಲೀಕರಣ ಉತ್ತೇಜಿಸುವ ಭಾಗವಾಗಿ ಆದಾಯ ತೆರಿಗೆ (ಐಟಿ) ಇಲಾಖೆಯು ಆನ್ಲೈನ್ನಲ್ಲಿ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಅನ್ನು ತ್ವರಿತವಾಗಿ ನೀಡುವ ಸೌಲಭ್ಯ ಆರಂಭಿಸಲು ಸಜ್ಜಾಗಿದೆ. ಇದು ಅರ್ಜಿದಾರರ ಕಾಯುವ ಸಮಯವನ್ನು ಕೊನೆಗೊಳಿಸಲಿದ್ದು, ಅರ್ಜಿದಾರ ತನ್ನ ಆಧಾರ್ ಡೇಟಾಬೇಸ್ನ ಮಾಹಿತಿ ಬಳಸಿಕೊಂಡು ಕೆಲವೆ ನಿಮಿಷಗಳಲ್ಲಿ ಪಡೆಯಬಹುದು.
ಮುಂದಿನ ಕೆಲವು ವಾರಗಳಲ್ಲಿ ಈ ಸೇವೆ ಉಚಿತವಾಗಿ ಆರಂಭವಾಗಲಿ ಎಂಬುದು ವರದಿಯಾಗಿದೆ. ಕಾರ್ಡ್ ಕಳೆದುಕೊಂಡವರು ಹಾಗೂ ಹೊಸದಾಗಿ ಪಡೆಯಲು ಇಚ್ಛಿಸುವವರು ತಮ್ಮ ಆಧಾರ್ ಸಂಖ್ಯೆ ಜೋಡಿಸಿ ನಂತರ ನೋಂದಾಯಿತ ಮೊಬೈಲ್ ನಂಬರ್ನ ಒಟಿಪಿ ಸಂಖ್ಯೆ ನಮೊದಿಸಿ ಎಲೆಕ್ಟ್ರಿಕ್ ಪ್ಯಾನ್ ಕಾರ್ಡ್ ಪಡೆಯಬಹುದು.
ಆಧಾರ್ ಕಾರ್ಡ್ನಲ್ಲಿನ ವೈಯಕ್ತಿಕ ಡೇಟಾ ಹಾಗೂ ಕೆಲವು ಮೂಲ ಮಾಹಿತಿ ಹೊರತುಪಡಿಸಿ ಇತರ ಯಾವುದೇ ಡಾಕ್ಯುಮೆಂಟ್ ಅಪ್ಲೋಡ್ ಮಾಡುವ ಅಗತ್ಯವಿಲ್ಲ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಂತಗಳು ಮುಗಿದ ಬಳಿಕ ಅರ್ಜಿದಾರರಿಗೆ ಡಿಜಿಟಲ್ ಸಹಿ ಮಾಡಿದ ಇ-ಪಾನ್ ನೀಡಲಾಗುತ್ತದೆ. ಅರ್ಜಿದಾರರ ಫೋಟೋ ಸೆರೆಹಿಡಿಯಲು ಕ್ಯೂಆರ್ ಕೋಡ್ ಹೊಂದಿರಲಿದೆ. ವರದಿಗಳ ಪ್ರಕಾರ, ಐಟಿ ಇಲಾಖೆಯು ಕಳೆದ ವಾರದಲ್ಲಿ 62,000 ಇ-ಪ್ಯಾನ್ಗಳನ್ನು ಬಿಡುಗಡೆ ಮಾಡಿದೆ. ಎಲ್ಲ ತೆರಿಗೆ ಪಾವತಿದಾರರಿಗೆ ಈ ಸೌಲಭ್ಯ ಲಭ್ಯವಾಗುವಂತೆ ಮಾಡಲು ಯೋಜಿಸುತ್ತಿದೆ.
ಇ-ಪ್ಯಾನ್ ಡೌನ್ಲೋಡ್ ಮಾಡುವುದು ಹೇಗೆ?
* ಅರ್ಜಿದಾರರು ಯುಟಿಐ-ಐಟಿಎಸ್ಎಲ್ ಮೂಲಕ ಇ-ಪ್ಯಾನ್ಗೆ ಅರ್ಜಿ ಸಲ್ಲಿಸಬಹುದು
* ಅಧಿಕೃತ ವೆಬ್ಸೈಟ್, ಎನ್ಎಸ್ಡಿಎಲ್ ಅಥವಾ ಯುಟಿಐಐಟಿಎಸ್ಎಲ್ಗೆ ಹೋಗಿ ಹೊಸ ಪ್ಯಾನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿ ಫಾರ್ಮ್ 49ಎ (Apply for new PAN card (Form 49A) ಆಯ್ಕೆಯನ್ನು ಕ್ಲಿಕ್ ಮಾಡಿ
* ಇ-ಪ್ಯಾನ್ ಜೊತೆಗೆ ಪ್ಯಾನ್ ಕಾರ್ಡ್ ಪ್ರತಿ ಪಡೆಯಲು ಬಯಸಿದರೆ ₹ 107 ಶುಲ್ಕ ಪಾವತಿಸಬೇಕಾಗುತ್ತದೆ. ಇ-ಪ್ಯಾನ್ ಮಾತ್ರ ಅಗತ್ಯವಿದ್ದರೆ ಅದಕ್ಕೆ ₹ 66 ಶುಲ್ಕವಿದೆ
* ಅಗತ್ಯ ಮಾಹಿತಿಯನ್ನು ನಮೂದಿಸಿ (ಪ್ಯಾನ್ ಸಂಖ್ಯೆ, ಆಧಾರ್ ವಿವರ, ಜನ್ಮ ದಿನಾಂಕದಂತೆ)
* ಸಹಿ ಮಾಡಿದ ಚಿತ್ರ ಮತ್ತು ಇತ್ತೀಚಿನ ಛಾಯಾಚಿತ್ರ ನಿಗದಿತ ಸ್ವರೂಪದಲ್ಲಿ ಅಪ್ಲೋಡ್ ಮಾಡಿ
* ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಅಥವಾ ಡಿಡಿ ಮೂಲಕ ಶುಲ್ಕ ಪಾವತಿಸಿ
* ಪಾವತಿಯ ನಂತರ ಹೆಚ್ಚಿನ ಪತ್ರವ್ಯವಹಾರಕ್ಕಾಗಿ 15 ಅಂಕಿಯ ಸಂಖ್ಯೆ ನೀಡಲಾಗುವುದು
* ಸಂಖ್ಯೆ ಪರಿಶೀಲನೆಯ ನಂತರ ಪ್ಯಾನ್ ಕಾರ್ಡ್ ಅನ್ನು ನಿರ್ದಿಷ್ಟ ವಿಳಾಸಕ್ಕೆ ರವಾನಿಸಲಾಗುತ್ತದೆ