ಬೆಂಗಳೂರು: ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯಿಂದ ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕ್ಗಳ ಯಾವುದೇ ಶಾಖೆಗಳು ಮುಚ್ಚುವುದಿಲ್ಲ ಎಂದು ಕೆನರಾ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಆರ್. ಎ. ಶಂಕರ ನಾರಾಯಣನ್ ಅವರು ಭರವಸೆ ನೀಡಿದ್ದಾರೆ.
ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದ 10 ರಾಷ್ಟ್ರೀಯ ಬ್ಯಾಂಕ್ಗಳ ವಿಲೀನದಲ್ಲಿ ಕೆನರಾ, ಸಿಂಡಿಕೇಟ್ ಹಾಗೂ ಕಾರ್ಪೊರೇಷನ್ ಬ್ಯಾಂಕ್ಗಳು ಸಹ ಒಳಗೊಂಡಿವೆ. ಹೀಗಾಗಿ, ಕಡಿಮೆ ದೂರ ಅಂತರದಲ್ಲಿರುವ ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕ್ಗಳ ಶಾಖೆಗಳು ಮುಚ್ಚಲಿವೆ ಎಂಬ ಮಾತುಗಳು ಕೇಳಿಬಂದಿದ್ದವು.
ವಿಲೀನ ಪ್ರಕ್ರಿಯೆ ಪ್ರಸ್ತಾವನೆಯಲ್ಲಿ ಕೇವಲ ಬ್ಯಾಂಕ್ಗಳ ಜೋಡಣೆ ಇದೆ. ಆದರೆ, ಶಾಖೆಗಳ ಮುಚ್ಚುವಿಕೆ ಇಲ್ಲ. ಬ್ಯಾಂಕ್ಗಳ ಯಾವುದೇ ಸಿಬ್ಬಂದಿಗೆ ಉದ್ಯೋಗ ಕಳೆದುಕೊಳ್ಳುವ ಕುರಿತು ಆತಂಕ ಪಡಬೇಕಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.
ಕೆನರಾ ಬ್ಯಾಂಕ್ನಲ್ಲಿ 58,000 ಹಾಗೂ ಸಿಂಡಿಕೇಟ್ ಬ್ಯಾಂಕ್ನಲ್ಲಿ 30,000 ಉದ್ಯೋಗಿಗಳು ಸೇರಿ ಒಟ್ಟು 98,000 ನೌಕರರು ಇದ್ದಾರೆ. ವಿಲೀನದ ಬಳಿಕವೂ ಉಭಯ ಬ್ಯಾಂಕ್ಗಳಲ್ಲಿ ಸಿಬ್ಬಂದಿ ಯಥಾವತ್ತಾಗಿ ತಮ್ಮ ಕೆಲಸ ಕಾರ್ಯನಿರ್ವಹಿಸಲಿದ್ದಾರೆ. ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಮತ್ತೆ ವಿಜಯಾ ಬ್ಯಾಂಕ್ ವಿಲೀನ ಆಗಿದ್ದಾಗಲೂ ಯಾವುದೇ ಶಾಖೆಗಳು ಮುಚ್ಚಿರಲಿಲ್ಲ. ಯಾವೊಬ್ಬ ಸಿಬ್ಬಂದಿಯನ್ನೂ ಕೆಲಸದಿಂದ ವಜಾ ಮಾಡಿರಲಿಲ್ಲ ಎಂದು ವಿವರಣೆ ನೀಡಿದರು.