ನವದೆಹಲಿ: ನೂತನ ಕಾರ್ಮಿಕ ಸಂಹಿತೆಗಳು ಕೈಗಾರಿಕಾ ಸಾಮರಸ್ಯ, ಅಧಿಕ ಉತ್ಪಾದಕತೆ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತವೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದರು.
ಎಫ್‌ಐಸಿಸಿಐನ ಅಂಗಸಂಸ್ಥೆಯಾದ ಎಐಒಇನ 86ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ವೆಬಿನಾರ್ ಮೂಲಕ ಉದ್ದೇಶಿಸಿ ಮಾತನಾಡಿದ ಗಂಗ್ವಾರ್, ಕಾರ್ಮಿಕ ಸಂಹಿತೆಗಳು ಒಂದು ನೋಂದಣಿ, ಒಂದು ಪರವಾನಗಿ ಮತ್ತು ಎಲ್ಲಾ ಕೋಡ್‌ಗಳಿಗೆ ಕಡಿಮೆ ರಿಟರ್ನ್ ಸಲ್ಲಿಕೆಯ ಜೊತೆಗೆ ಪಾರದರ್ಶಕ, ಉತ್ತರದಾಯಿತ್ವ ಮತ್ತು ಸರಳ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುತ್ತವೆ. ಉದ್ಯೋಗಿಗಳಿಗೆ ನೆರವಾಗಲು ಮತ್ತು ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲು ನಾವು ಕಾರ್ಮಿಕ ಸಂಹಿತೆಗಳ ಮೂಲಕ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು.
ಕಳೆದ 73 ವರ್ಷಗಳಲ್ಲಿ ಮೊದಲ ಬಾರಿಗೆ ದೇಶಕ್ಕೆ ಅವಶ್ಯಕವಿರುವ ಕಾರ್ಮಿಕ ಸುಧಾರಣೆಗಳನ್ನು ತರಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಈ ಸಂಹಿತೆಗಳನ್ನು ಅಂತಿಮಗೊಳಿಸುವ ಮೊದಲು ಉದ್ಯೋಗದಾತರು, ಕಾರ್ಮಿಕ ಸಂಘಟನೆಗಳು ಮತ್ತು ತಜ್ಞರು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಲಾಯಿತು ಎಂದು ಹೇಳಿದರು.
ಹೊಸ ಕಾರ್ಮಿಕ ಸಂಹಿತೆಗಳ ಪ್ರಯೋಜನಗಳ ಬಗ್ಗೆ ಮಾತನಾಡಿದ ಗಂಗ್ವಾರ್, ಸಂಘಟಿತ, ಅಸಂಘಟಿತ ವಲಯದ ಸುಮಾರು 50 ಕೋಟಿ ಕಾರ್ಮಿಕರು ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ನಿಗದಿತ ಅವಧಿಯ ಉದ್ಯೋಗವನ್ನು ಪರಿಚಯಿಸಲಾಗಿದೆ ಮತ್ತು ನಿಗದಿತ ಅವಧಿಯ ಉದ್ಯೋಗಿಗಳಿಗೆ ಸಾಮಾನ್ಯ ಉದ್ಯೋಗಿಗಳಂತೆಯೇ ಸೇವೆಗಳು ದೊರೆಯುತ್ತವೆ ಎಂದರು.
ಯಾವುದೇ ಘಟಕದಲ್ಲಿ ದಿಢೀರ್ ಮುಷ್ಕರ ನಡೆಸುವುದನ್ನು ತಡೆಗಟ್ಟಲು, ಐಆರ್ ಸಂಹಿತೆಯಲ್ಲಿ ಮುಷ್ಕರಕ್ಕೆ 14 ದಿನಗಳ ನೋಟಿಸ್ ಅನ್ನು ಪರಿಚಯಿಸಲಾಗಿದೆ. ಯಾವುದೇ ಸಂಸ್ಥೆಗಳ ಕಾರ್ಮಿಕರು ಮುಷ್ಕರವನ್ನು ಘೋಷಿಸುವ ಮೊದಲು 14 ದಿನಗಳ ನೋಟಿಸ್ ನೀಡಬೇಕಾಗುತ್ತದೆ. ಈ ಅವಧಿಯಲ್ಲಿ, ಕುಂದುಕೊರತೆಗಳನ್ನು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಕಾಲಾವಕಾಶ ನೀಡಲು ಇದನ್ನು ಪರಿಚಯಿಸಲಾಗಿದೆ. ಮಾತುಕತೆಗಾಗಿ ಒಕ್ಕೂಟವನ್ನು ಸ್ಥಾಪಿಸುವ ಅವಕಾಶವೂ ಇರುತ್ತದೆ, ಅದು ಕಾರ್ಮಿಕರಿಗೆ ಮತ್ತು ಉದ್ಯಮಕ್ಕೆ ಸಹ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.