ಚೆನ್ನೈ: ಸಂಸತ್ತಿನಲ್ಲಿ ಬಜೆಟ್ ಮಂಡಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ದಾಖಲೆಗಳನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ತರುವ ಮೂಲಕ ಹಲವು ವರ್ಷಗಳ ಶಿಷ್ಟಾಚಾರ ಮುರಿದರು. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಚೆನ್ನೈನ ವ್ಯಾಪಾರ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಪ್ರಥಮ ಬಜೆಟ್ ಮಂಡನೆಗೆ ಇಂಗ್ಲಿಷ್ ಶೈಲಿಯಲ್ಲಿ ಸೂಟ್‌ಕೇಸ್ ಒಯ್ಯಲಿಲ್ಲ ಎಂಬುದು ಸಾಕಷ್ಟು ಸುದ್ದಿಯಾಯಿತು. ನಾವು ನಮ್ಮದೇ ಆದ ಲೆಕ್ಕಪತ್ರ ಪುಸ್ತಕಗಳನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ನವರಾತ್ರಿ ಅಥವಾ ಪೂಜೆಯ ಸಮಯದಲ್ಲಿ ನಾವು ಲೆಕ್ಕಪತ್ರಗಳ ಪುಸ್ತಕಗಳ ಮೇಲೆ ಕುಂಕುಮ ಹಚ್ಚಿ, ಹೂವಿಟ್ಟು ಅಕ್ಷತೆಹಾಕಿ ಪೂಜ್ಯನೀಯ ಭಾವನೆಯಿಂದ ಗೌರವಿಸುತ್ತೇವೆ. ಅದು ನಮ್ಮ ಸಂಸ್ಕೃತಿ. ನಾನು ಬಜೆಟ್ ಪ್ರತಿ ಮೇಲೆ ಅರಿಶಿನ, ಕುಂಕುಮ ಅಥವಾ ಅಕ್ಷತೆಯನ್ನಾಗಲಿ ಹಾಕಿರಲಿಲ್ಲ. ಇದು ಜಾತ್ಯತೀತ ಸರ್ಕಾರ. ಆದರೆ, ನಾನು ಚರ್ಮದ ಸೂಟ್‌ಕೇಸ್ ಬಳಸಲಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಪಾರದರ್ಶಕ ಚಟುವಟಿಕೆಗಳನ್ನು ಎತ್ತಿ ಹಿಡಿಯುತ್ತಿದೆ. ನಮ್ಮದು ಸೂಟ್ಕೇಸ್ಗಳ ವಿನಿಮಯದ ಸರ್ಕಾರವಲ್ಲ. ನಮ್ಮ ಸರ್ಕಾರದಲ್ಲಿ ಸೂಟ್ಕೇಸ್ಗಳನ್ನು ಕೊಂಡೊಯ್ಯುವ ಅಥವಾ ತರುವ ಅಗತ್ಯವಿಲ್ಲ ಎಂದು ತಿಳಿಸಿದರು.