ನವದೆಹಲಿ: 2021ನೇ ಹಣಕಾಸು ಸಾಲಿಗೆ ಭಾರತದ ನಿರೀಕ್ಷಿತ ಆರ್ಥಿಕ ಬೆಳವಣಿಗೆ ದರವನ್ನು ಕ್ರಿಸಿಲ್ ಇಂಡಿಯಾ ಪರಿಷ್ಕರಿಸಿದ್ದು, ಈ ಹಿಂದಿನ ಶೇ 3.5 ರಿಂದ ಶೇ 1.8 ಕ್ಕೆ ಇಳಿಸಿದೆ. ಪ್ರಸ್ತುತ ತ್ರೈಮಾಸಿಕದ ಅಂತ್ಯದ ವೇಳೆಗೆ ವಾಸ್ತವದಲ್ಲಿ ಲಾಕ್ಡೌನ್ ಮುಗಿಯುವ, ಸಾಮಾನ್ಯ ಮುಂಗಾರು ಹಾಗೂ ಕನಿಷ್ಠ 3.5 ಲಕ್ಷ ಕೋಟಿ ರೂಪಾಯಿಗಳ ವಿತ್ತೀಯ ಬೆಂಬಲಗಳ ನಿರೀಕ್ಷೆಯ ಆಧಾರದಲ್ಲಿ ಕ್ರಿಸಿಲ್ ಹೊಸ ಪೂರ್ವಾನುಮಾನಗಳನ್ನು ಅಂದಾಜಿಸಿದೆ.
ಮೇ 3ರ ನಂತರವೂ ಲಾಕ್ಡೌನ್ ಮುಂದುವರಿಯುವ ಸಾಧ್ಯತೆಯಿದ್ದು, ಭಾರತ ಮಾತ್ರವಲ್ಲದೆ ವಿಶ್ವದ ಬಹುತೇಕ ಮುಂದುವರಿದ ದೇಶಗಳಲ್ಲಿ ಹಿಂಜರಿತದ ಛಾಯೆ ಕಾಣಲಿದೆ ಎಂದು ಕ್ರಿಸಿಲ್ ಹೇಳಿದೆ.
ಜಾಗತಿಕ ಜಿಡಿಪಿ ದರ 0.4 ಇರಲಿದೆ ಎಂದು ಈ ಮುನ್ನ ಎಸ್ ಆ್ಯಂಡ್ ಪಿ ಅಂದಾಜಿಸಿತ್ತು. ಆದರೆ ಈಗಿನ ಪರಿಸ್ಥಿತಿಗಳಲ್ಲಿ ಇದು -2.4 ಕ್ಕೆ ಕುಸಿಯಲಿದ್ದು, ಭಾರತದ ಆರ್ಥಿಕ ಬೆಳವಣಿಗೆ ದರ ಶೂನ್ಯಕ್ಕೆ ತಲುಪುವ ಸಾಧ್ಯತೆಗಳಿವ ಎಂದು ಕ್ರಿಸಿಲ್ ಹೇಳಿದೆ.
ಭಾರತದ ಆರ್ಥಿಕತೆಯ ಮೇಲೆ ಲಾಕ್ಡೌನ್ ಪರಿಣಾಮಗಳು ಈಗಾಗಲೇ ಕಾಣಲಾರಂಭಿಸಿವೆ. ಅಟೊಮೊಬೈಲ್ ಕ್ಷೇತ್ರದಲ್ಲಿ ಶೇ.44 ರಷ್ಟು ಕುಸಿತ ಕಂಡುಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ರಫ್ತು ಶೇ.33 ರಷ್ಟು ಕಡಿಮೆಯಾಗಿವೆ. ಕಟ್ಟಡ ನಿರ್ಮಾಣ, ಉತ್ಪಾದನೆ ಹಾಗೂ ಸೇವಾವಲಯಗಳ ಅಸಂಘಟಿತ ಕಾರ್ಮಿಕರ ಮೇಲೆ ಲಾಕ್ಡೌನ್ ವ್ಯತಿರಿಕ್ತ ಪರಿಣಾಮ ಬೀರಲಿದೆ.
"ಭಾರತದ ಜಿಡಿಪಿ ಬೆಳವಣಿಗೆಗೆ ಶೇ 4 ರಷ್ಟು ಶಾಶ್ವತ ಹಿನ್ನಡೆಯುಂಟಾಗಲಿದ್ದು, 2022 ರ ಹಣಕಾಸು ವರ್ಷದಲ್ಲಿ ಶೇ 7 ರಷ್ಟು ವಾಸ್ತವಿಕ ಜಿಡಿಪಿ ಬೆಳವಣಿಗೆಯನ್ನು ಸಾಧಿಸಬಹುದು. ಜಿಡಿಪಿ ಬೆಳವಣಿಗೆ ದರ ಇದೇ ಪ್ರಮಾಣದಲ್ಲಿ ಸ್ಥಿರವಾಗಿ ಮುಂದುವರಿಯಲಿದೆ ಎಂದುಕೊಂಡರೂ ಕೋವಿಡ್-19 ಮುಂಚಿನ ಇದ್ದ ಬೆಳವಣಿಗೆಯ ವೇಗ ಇರಲಾರದು." ಎಂದು ಕ್ರಿಸಿಲ್ನ ಮುಖ್ಯ ಆರ್ಥಿಕ ತಜ್ಞ ಧರ್ಮಕೃತಿ ಜೋಶಿ ಹೇಳಿದ್ದಾರೆ.