ನವದೆಹಲಿ: ಪಿಕೋಡಿ ಡಾಟ್ ಕಾಮ್ ಸಿದ್ಧಪಡಿಸಿದ ಸರಾಸರಿ ವೇತನದ ಜಾಗತಿಕ ಶ್ರೇಯಾಂಕ ಸೂಚ್ಯಂಕದ ಪ್ರಕಾರ, ತಿಂಗಳಿಗೆ ಸರಾಸರಿ ವೇತನದಲ್ಲಿ 106 ದೇಶಗಳಲ್ಲಿ ಭಾರತ 72ನೇ ಸ್ಥಾನದಲ್ಲಿದೆ.
ಸರಾಸರಿ ಮಾಸಿಕ 32,800 ರೂ. (437 ಡಾಲರ್) ನೀಡುತ್ತಿದೆ. 106 ದೇಶಗಳಲ್ಲಿ ಭಾರತವು 72ನೇ ಸ್ಥಾನದಲ್ಲಿದೆ ಎಂದು ರಿಯಾಯಿತಿ ಕೂಪನ್ ಒದಗಿಸುವ ಅಂತಾರಾಷ್ಟ್ರೀಯ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಪಿಕೋಡಿ ಡಾಟ್ಕಾಮ್ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.
ಈ ಶ್ರೇಣಿಯಲ್ಲಿ ಸ್ವಿಟ್ಜರ್ಲೆಂಡ್ 4,49,000 ರೂ. (5,989 ಡಾಲರ್) ಮೂಲಕ ಅಗ್ರಸ್ಥಾನದಲ್ಲಿದ್ದರೆ, ಕ್ಯೂಬಾ 2,700 ರೂ. (36 ಡಾಲರ್) ವೇತನದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಸ್ವಿಟ್ಜರ್ಲೆಂಡ್ ಬಳಿಕ ಲಕ್ಸೆಂಬರ್ಗ್ ಮತ್ತು ಅಮೆರಿಕ ನಾಗರಿಕರು ಕ್ರಮವಾಗಿ 3,00,900 ರೂ. (4,014 ಡಾಲರ್) ಮತ್ತು 2,64,900 ರೂ. (3,534 ಡಾಲರ್) ಗಳಿಸುತ್ತಾರೆ. ಮೊದಲ ಹತ್ತು ಪಟ್ಟಿಯಲ್ಲಿ ಡೆನ್ಮಾರ್ಕ್ (3,515 ಡಾಲರ್), ಸಿಂಗಾಪುರ್ (3,414 ಡಾಲರ್), ಆಸ್ಟ್ರೇಲಿಯಾ (3,333 ಡಾಲರ್), ಕತಾರ್ (3,232 ಡಾಲರ್), ನಾರ್ವೆ (3,174 ಡಾಲರ್), ಹಾಂಗ್ ಕಾಂಗ್ (3,024 ಡಾಲರ್) ಮತ್ತು ಐಸ್ಲ್ಯಾಂಡ್ (2,844 ಡಾಲರ್) ಸೇರಿವೆ.
ಭಾರತವು ಸರಾಸರಿ 32,800 ರೂ. ವೇತನ ನೀಡುತ್ತಿದ್ದು, ಕಝಕಿಸ್ತಾನ್ (32,700 ರೂ.), ಬ್ರೆಜಿಲ್ (26,000 ರೂ.), ಈಜಿಪ್ಟ್ (16,400 ರೂ.) ದೇಶಗಳನ್ನು ಮೀರಿಸಿದೆ. ಕ್ಯೂಬಾ, ಉಗಾಂಡಾ ಮತ್ತು ನೈಜೀರಿಯಾಗಳು 2,700 ರಿಂದ 13,800 ರೂ.ಯಷ್ಟು ವೇತನ ಪಾವತಿಸುತ್ತೇವೆ ಎಂದು ವರದಿ ತಿಳಿಸಿದೆ.
ಏಷ್ಯಾ ಖಂಡದಲ್ಲಿ ಭಾರತವು ದಕ್ಷಿಣ ಕೊರಿಯಾ (1,72,900 ರೂ.), ಚೀನಾ (72,100 ರೂ.), ಮಲೇಷ್ಯಾ (62,700 ರೂ.), ಥೈಲ್ಯಾಂಡ್ (46,400 ರೂ) ದೇಶಗಳಿಗಿಂತ ಹಿಂದಿದೆ. ವಿಯೆಟ್ನಾಂ (30,200 ರೂ.), ಫಿಲಿಪೈನ್ಸ್ (23,100 ರೂ.), ಇಂಡೋನೇಷ್ಯಾ (22,900 ರೂ.) ಮತ್ತು ಪಾಕಿಸ್ತಾನ (15,700 ರೂ.) ರಾಷ್ಟ್ರಗಳಿಗಿಂತ ಮುಂದಿದೆ.
ಏಷ್ಯಾದಲ್ಲಿ ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ಹಾಂಗ್ ಕಾಂಗ್ನ ಸರಾಸರಿ ವೇತನ 2,00,000 ರೂ.ಗೂ ಹೆಚ್ಚಿರುವ ಏಕೈಕ ದೇಶಗಳಾಗಿವೆ.