ನವದೆಹಲಿ: ಕೋವಿಡ್ ಬಿಕ್ಕಟ್ಟು ಮತ್ತು ರಾಜ್ಯಗಳ ಸ್ಥಳೀಯ ನಿರ್ಬಂಧಗಳ ಮಧ್ಯೆ ಕಾರ್ಮಿಕ ವರ್ಗದ ಪರಿಸ್ಥಿತಿ ಈ ಬಾರಿ ಕೆಟ್ಟದಾಗಿದೆ ಎಂದು ತೋರುತ್ತಿರುವ ಕಾರಣ ಭಾರತವು "ಗಂಭೀರ ಜೀವನೋಪಾಯ ಬಿಕ್ಕಟ್ಟಿನ"ತ್ತ ಸಾಗುತ್ತಿದೆ ಎಂದು ಅರ್ಥಶಾಸ್ತ್ರಜ್ಞ ಜೀನ್ ಡ್ರೆಜ್ ಕಳವಳ ವ್ಯಕ್ತಪಡಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ, 2024-25ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಸರ್ಕಾರದ ಗುರಿ ಎಂದಿಗೂ "ಕಾರ್ಯಸಾಧ್ಯವಾಗುವ ಗುರಿ" ಅಲ್ಲ ಮತ್ತು ಇದು ಕೇವಲ ಭಾರತೀಯ ಗಣ್ಯರ "ಸೂಪರ್-ಪವರ್ ಮಹತ್ವಾಕಾಂಕ್ಷೆಗಳಿಗೆ" ತುತ್ತಾಗುವುದು ಎಂದು ಹೇಳಿದರು.
ಕೊರೊನಾದ ಎರಡನೇ ಅಲೆ ಭಾರತದ ಆರ್ಥಿಕತೆಯ ಮೇಲೆ ಬೀರಿದ ಪರಿಣಾಮದ ಕುರಿತು ತಿಳಿಸಿದ ಅವರು, ಕಳೆದ ವರ್ಷ ಈ ಸಮಯದಲ್ಲಿ ಇದ್ದ ಪರಿಸ್ಥಿತಿಗಿಂತ ಇಂದಿನ ಪರಿಸ್ಥಿತಿಯು ಹೆಚ್ಚು ಭಿನ್ನವಾಗಿಲ್ಲ ಎಂದು ತಿಳಿಸಿದರು.
"ಸ್ಥಳೀಯ ಲಾಕ್‌ಡೌನ್‌ಗಳ ಆರ್ಥಿಕ ಪರಿಣಾಮಗಳು ರಾಷ್ಟ್ರೀಯ ಲಾಕ್‌ಡೌನ್‌ನಂತೆ ವಿನಾಶಕಾರಿಯಾಗದಿರಬಹುದು. ಆದರೆ, ಕೆಲವು ವಿಷಯಗಳಲ್ಲಿ, ಕಾರ್ಮಿಕ ವರ್ಗದ ಮೇಲೆ ಕೆಟ್ಟ ಪರಿಣಾಮ ಬೀರಿದೆ" ಎಂದು ಅವರು ಅಭಿಪ್ರಾಯಪಟ್ಟರು.
ಸೋಂಕಿನ ಭಯವು ಹೆಚ್ಚು ವ್ಯಾಪಕವಾಗಿದ್ದು, ಇದು ಆರ್ಥಿಕ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸಲು ಕಷ್ಟವಾಗಲಿದೆ. ಕಳೆದ ವರ್ಷ ಪರಿಹಾರ ಪ್ಯಾಕೇಜ್ ಇತ್ತು ಮತ್ತು ಈ ಬಾರಿ ಪರಿಹಾರ ಕ್ರಮಗಳ ಕುರಿತು ಚರ್ಚಿಸಲಾಗುತ್ತಿಲ್ಲ ಎಂದು ಡ್ರೆಜ್ ಅಭಿಪ್ರಾಯಪಟ್ಟಿದ್ದಾರೆ.