ನವದೆಹಲಿ: ಭಾರತಕ್ಕೆ ಮೊದಲ ಅಧಿಕೃತ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸ್ವರಾಷ್ಟ್ರಕ್ಕೆ ವಾಪಸ್ ಆಗುವ ಕೆಲ ಗಂಟೆಗೂ ಮುನ್ನ ಮಾಧ್ಯಮಗೋಷ್ಠಿಯಲ್ಲಿ 'ಭಾರತವು ಹೆಚ್ಚಿನ ಸುಂಕ ವಿಧಿಸುವ ರಾಷ್ಟ್ರವಾಗಿದೆ' ಎಂದು ಹೇಳಿಕೆ ನೀಡಿದ್ದಾರೆ.
ದೇಶದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಭಾರತವು ಬಹುಶಃ ಹೆಚ್ಚಿನ ಸುಂಕಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಹಾರ್ಲೆ ಡೇವಿಡ್ಸನ್ ಭಾರಿ ಪ್ರಮಾಣದ ಸುಂಕವನ್ನು ಪಾವತಿಸಬೇಕಾಗುತ್ತದೆ. ಅಮೆರಿಕವನ್ನು ನ್ಯಾಯಯುತವಾಗಿ ಪರಿಗಣಿಸಬೇಕಾಗಿದೆ ಎಂದರು.
ಉಭಯ ದೇಶಗಳು ದೊಡ್ಡ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿವೆ ಎಂದು ಅಮೆರಿಕ ಅಧ್ಯಕ್ಷರು ಈಗಾಗಲೇ ಘೋಷಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಹೈದರಾಬಾದ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 3 ಬಿಲಿಯನ್ ಡಾಲರ್ (21,000 ಕೋಟಿ ರೂ.) ಮೌಲ್ಯದ ರಕ್ಷಣಾ ಒಪ್ಪಂದಕ್ಕೆ ಇದೇ ವೇಳೆ ಅವರು ಸಹಿ ಹಾಕಿದರು.