ನವದೆಹಲಿ: ಆದಾಯ ತೆರಿಗೆ ಇಲಾಖೆ ಹೊಸ ಪೋರ್ಟಲ್ ಇ-ಫೈಲಿಂಗ್ 2.0 ಅನ್ನು ನಿನ್ನೆಯೇ ಪ್ರಾರಂಭಿಸಿದ್ದು, ಇದು ಆನ್‌ಲೈನ್ ರಿಟರ್ನ್ಸ್ ಫೈಲಿಂಗ್ ಮತ್ತು ತೆರಿಗೆ ಪಾವತಿಯನ್ನು ಸುಲಭಗೊಳಿಸುತ್ತದೆ.
ಹೊಸ ಪೋರ್ಟಲ್ - www.incometax.gov.in - ಇದನ್ನು ತೆರಿಗೆದಾರರು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಬಳಸಬಹುದಾಗಿದೆ. ಈ ಹಿಂದೆ - 'http://incometaxindiaefiling.gov.in - ಪೋರ್ಟಲ್ ಇತ್ತು.
ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ತಮ್ಮ ಡಿಎಸ್ಸಿ (ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್) ಮರು ನೋಂದಾಯಿಸಲು, 'ಪ್ರಾಥಮಿಕ ಸಂಪರ್ಕ'ದ ಅಡಿ ವೈಯಕ್ತಿಕ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನವೀಕರಿಸಲು, 'ಬಾಕಿ ಇರುವ ಕ್ರಮ'ದ ಮೇಲೆ ಕಾರ್ಯನಿರ್ವಹಿಸಲು ಮತ್ತು ಯಾವುದಾದರೂ 'ಬಾಕಿ ಇರುವ ಬೇಡಿಕೆಗೆ' ಸ್ಪಂದಿಸುವ ಸಲುವಾಗಿಯೇ ಈ ಸೈಟ್ ಅನ್ನು ಮರು ಹೊಂದಾಣಿಕೆ ಮಾಡಿ ಹೊಸ ರೂಪು ನೀಡಲಾಗಿದೆ.
ವೈಯಕ್ತಿಕ, ಕಂಪನಿ, ಕಂಪನಿಯೇತರ ಮತ್ತು ತೆರಿಗೆ ವೃತ್ತಿಪರರಂತಹ ವಿವಿಧ ವರ್ಗದ ತೆರಿಗೆದಾರರಿಗೆ ಪೋರ್ಟಲ್ ಪ್ರತ್ಯೇಕ ಟ್ಯಾಬ್‌ಗಳನ್ನು ಹೊಂದಿದೆ. ಐಟಿಆರ್ ಫೈಲಿಂಗ್, ಮರುಪಾವತಿ ಸ್ಥಿತಿ ಮತ್ತು ತೆರಿಗೆ ಸ್ಲ್ಯಾಬ್‌ಗಳ ಸೂಚನೆಗಳನ್ನು ಪರಿಶೀಲಿಸಲು ತೆರಿಗೆದಾರರಿಗೆ ಇದು ಡ್ರಾಪ್-ಡೌನ್ ಮೆನು ಹೊಂದಿದೆ.
ಐಟಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ 8.46 ಕೋಟಿಗೂ ಹೆಚ್ಚು ವೈಯಕ್ತಿಕ ನೋಂದಾಯಿತ ಬಳಕೆದಾರರಿದ್ದಾರೆ. ಮೌಲ್ಯಮಾಪನ ವರ್ಷ 2020-21ಕ್ಕೆ (2019-20ರ ಆರ್ಥಿಕ ವರ್ಷ) 3.13 ಕೋಟಿಗೂ ಹೆಚ್ಚು ಐಟಿಆರ್ಗಳನ್ನು ಇ - ಪರಿಶೀಲಿಸಲಾಗಿದೆ.
ಹೊಸ ಸೈಟ್ ತೆರಿಗೆದಾರರಿಗೆ ಪೋರ್ಟಲ್‌ನಲ್ಲಿ ಲಭ್ಯವಿರುವ ವಿವಿಧ ಸೇವೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ವಿವರವಾದ ಬಳಕೆದಾರರ ಕೈಪಿಡಿಗಳು, FAQಗಳು ಮತ್ತು ವೀಡಿಯೊಗಳನ್ನು ಸಹ ಹೊಂದಿದೆ.
ಅಲ್ಲದೇ, ಮಾರ್ಗದರ್ಶಿ ಸಹಾಯಕ್ಕಾಗಿ ಚಾಟ್‌ಬಾಟ್ ಮತ್ತು ಸಹಾಯವಾಣಿ ಕೂಡಾ ಒದಗಿಸಲಾಗಿದೆ.