ನವದೆಹಲಿ: ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಅವಧಿಯ ಲಾಕ್ಡೌನ್ನಿಂದಾಗಿ ನೆಲಕಚ್ಚಿರುವ ದೇಶದ ಕೈಗಾರಿಕಾ ವಲಯಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಯಿದೆ.
ಪ್ಯಾಕೇಜ್ ಘೋಷಣೆಯ ರೂಪುರೇಷೆಗಳನ್ನು ಸರ್ಕಾರ ಕಳೆದ ಕೆಲ ದಿನಗಳಿಂದ ರೂಪಿಸುತ್ತಿದೆ. ಒಂದೇ ಬಾರಿಗೆ ದೊಡ್ಡ ಪ್ಯಾಕೇಜ್ ಬದಲು ನಿರ್ದಿಷ್ಟ ವಲಯಗಳನ್ನು ಗುರಿಯಾಗಿಸಿಕೊಂಡು ಚಿಕ್ಕ ಪ್ಯಾಕೇಜ್ಗಳನ್ನು ಘೋಷಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಅಂದಾಜು 11.2 ಲಕ್ಷ ಕೋಟಿ ರೂಗಳ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸುವುದು ಸೂಕ್ತ. ಈಗಾಗಲೇ ಉಂಟಾಗಿರುವ ಆರ್ಥಿಕ ಹಾನಿಯನ್ನು ಗಮನಿಸಿದಲ್ಲಿ ಇದು 2020ನೇ ಸಾಲಿನ ಆರ್ಥಿಕ ವರ್ಷದ ಶೇ.4.8 ರಷ್ಟಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಅಕ್ವೈಟ್ ಇಂಡಿಯಾ ಹೇಳಿದೆ.
ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಸರಾಸರಿ ವಾರ್ಷಿಕ ಶೇ.2.4 ರಷ್ಟು ವಿತ್ತೀಯ ಕೊರತೆ ಹೊಂದಿರುವ ಕರ್ನಾಟಕ, ಗುಜರಾತ್, ತಮಿಳು ನಾಡು, ಮಹಾರಾಷ್ಟ್ರ, ಹರಿಯಾಣ ಮತ್ತು ತೆಲಂಗಾಣ ರಾಜ್ಯಗಳ ಪರಿಸ್ಥಿತಿ ಉತ್ತಮವಾಗಿದೆ ಎಂದು ಅಕ್ವೈಟ್ ತಿಳಿಸಿದೆ.