ನವದೆಹಲಿ: ರೈತರ ಆದಾಯ ಹೆಚ್ಚಿಸಲು ಕೊಬ್ಬರಿ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕ್ವಿಂಟಲ್‌ಗೆ 375 ರೂ. ಹಾಗೂ ಉಂಡೆ ಕೊಬ್ಬರಿ 300 ರೂ.ಯಷ್ಟು ಏರಿಕೆ ಮಾಡಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟದ ಸಭೆ (ಸಿಸಿಇಎ) ಈ ತೀರ್ಮಾನ ತೆಗೆದುಕೊಂಡಿದ್ದು, ಇದರಿಂದ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ.
ಮಿಲ್ಲಿಂಗ್ ಕೊಪ್ರಾದ ಸಾಮಾನ್ಯ ಸರಾಸರಿ ಗುಣಮಟ್ಟ (ಎಫ್‌ಎಕ್ಯೂ) ಎಂಎಸ್‌ಪಿ 2020ರ ಋತುವಿನಲ್ಲಿ ಕ್ವಿಂಟಲ್‌ಗೆ 9,960 ರೂ.ಗಳಿಂದ 10,335 ರೂ.ಗೆ ಹೆಚ್ಚಿಸಲಾಗಿದೆ. ಉಂಡೆ ಕೊಬ್ಬರಿ (ಬಾಲ್ ಕೊಪ್ರಾ) ಎಂಎಸ್‌ಪಿ ಕಳೆದ ವರ್ಷ ಕ್ವಿಂಟಲ್‌ಗೆ 10,300 ರೂ.ಯಿಂದ 10,600 ರೂ.ಗೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ಬಜೆಟ್ ಹೊಸ್ತಿಲಲ್ಲಿ ತೈಲ ದರ ಸ್ಫೋಟ: ಐತಿಹಾಸಿಕ 100 ರೂ.ಗಡಿ ದಾಟಿದ ಪೆಟ್ರೋಲ್ ರೇಟ್!
ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಮಿಲ್ಲಿಂಗ್ ಕೊಪ್ರಾದ ಎಂಎಸ್‌ಪಿ ಉತ್ಪಾದನಾ ವೆಚ್ಚಕ್ಕಿಂತ ಶೇ 52ರಷ್ಟು ಹೆಚ್ಚಾಗಿದೆ. ಆದರೆ ಉಂಡೆ ಕೊಬ್ಬರಿ ಬೆಂಬಲ ಬೆಲೆ ಶೇ 55ರಷ್ಟು ಏರಿಕೆಯಾಗಿದೆ ಎಂದರು.
2021ರ ಋತುವಿನಲ್ಲಿ ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ, ಎಂಎಸ್‌ಪಿಯ ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟಕ್ಕೆ ನಿಗದಿಪಡಿಸುವ ತತ್ವಕ್ಕೆ ಅನುಗುಣವಾಗಿದೆ. ಇದನ್ನು ಸರ್ಕಾರವು 2018-19ರ ಬಜೆಟ್‌ನಲ್ಲಿ ಘೋಷಿಸಿತ್ತು.
ಮಾರುಕಟ್ಟೆ ಬೆಲೆಗಳು ಸಾಮಾನ್ಯವಾಗಿ ಎಂಎಸ್‌ಪಿಗಿಂತ ಹೆಚ್ಚಿರುತ್ತವೆ. ಆದರೆ, ದರಗಳು ಬೆಂಬಲ ಬೆಲೆಗಿಂತ ಕಡಿಮೆಯಾದರೆ ಸರ್ಕಾರಿ ಸಂಸ್ಥೆಗಳು ರೈತರ ಹಿತಾಸಕ್ತಿ ಕಾಪಾಡಲು ಉತ್ಪನ್ನವನ್ನು ಖರೀದಿಸುತ್ತವೆ ಎಂದು ಜಾವಡೇಕರ್ ಹೇಳಿದರು.
ಕೇಂದ್ರದ ಈ ನಿರ್ಧಾರದಿಂದ ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರಿಗೆ ಪ್ರಯೋಜನವಾಗಲಿದೆ.