ನವದೆಹಲಿ: ಕೇಂದ್ರ ಸರ್ಕಾರವು ಐಟಿ ಹಾಗೂ ಬಿಪಿಒ ಕಂಪನಿಗಳಿಗೆ ನೀಡಿದ್ದ ವರ್ಕ್ ಫ್ರಮ್ ಹೋಮ್ ಅಂತಿಮ ಗಡುವನ್ನು ಮತ್ತೆ ವಿಸ್ತರಣೆ ಮಾಡಿದೆ.
ಮನೆಯಿಂದ ಕೆಲಸ ಮಾಡಿ ಅವಧಿಯು ಜುಲೈ 31ಕ್ಕೆ ಮುಕ್ತಾಯಗೊಳ್ಳುತ್ತಿತ್ತು. ಐಟಿ ಮತ್ತು ಬಿಪಿಒ ಕಂಪನಿಗಳಿಗೆ ವರ್ಕ್ ಫ್ರಮ್ ಹೋಮ್ ಮಾನದಂಡಗಳನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೋವಿಡ್-19 ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಕಾಳಜಿಯನ್ನು ಗಮನದಲ್ಲಿ ಇರಿಸಿಕೊಂಡು ಮನೆಯಿಂದ ಕೆಲಸ ಮಾಡಲು ಅನುಕೂಲವಾಗುವಂತೆ 2020ರ ಡಿಸೆಂಬರ್ 31ರವರೆಗೆ ಇತರ ಸೇವಾ ಪೂರೈಕೆದಾರರಿಗೆ ನಿಯಮಗಳು ಮತ್ತು ಷರತ್ತುಗಳಲ್ಲಿನ ಸಡಿಲಿಕೆಗಳನ್ನು ಡಿಒಟಿ ವಿಸ್ತರಿಸಿದೆ ಎಂದು ದೂರಸಂಪರ್ಕ ಇಲಾಖೆ ತಡರಾತ್ರಿಯ ಟ್ವೀಟ್‌ನಲ್ಲಿ ತಿಳಿಸಿದೆ.
ಪ್ರಸ್ತುತ, ಸುಮಾರು 85 ಪ್ರತಿಶತದಷ್ಟು ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನಿರ್ಣಾಯಕ ಕಾರ್ಯಗಳನ್ನು ನಿರ್ವಹಿಸುವವರು ಮಾತ್ರ ಕಚೇರಿಗಳಿಗೆ ತೆರಳುತ್ತಿದ್ದಾರೆ.