ನವದೆಹಲಿ: ಪ್ರಸಕ್ತ ವಿತ್ತೀಯ ವರ್ಷದ ಮೊದಲ ಎರಡು ತಿಂಗಳಿನಲ್ಲಿ ಹಣಕಾಸು ಕೊರತೆಯು ಬಜೆಟ್ ಅಂದಾಜಿನ ಶೇ 58.6ರಷ್ಟಾಗಿದೆ ಎಂದು ಮಹಾಲೇಖಪಾಲರ (ಸಿಜಿಎ) ವರದಿ ತಿಳಿಸಿದೆ.
ಹಣದ ಮೌಲ್ಯದ ಲೆಕ್ಕದಲ್ಲಿ ಕೊರತೆಯ ಪ್ರಮಾಣವು 4.66 ಲಕ್ಷ ಕೋಟಿ ರೂ.ಗೆ ತಲುಪಿದೆ. ಕೊರೊನಾ ಪ್ರೇರೇಪಿತ ಲಾಕ್‌ಡೌನ್‌ನಿಂದಾಗಿ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿದ್ದು, ಹಣಕಾಸಿನ ಕೊರತೆ ಹೆಚ್ಚಳವಾಗಿದೆ. ಈ ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇ 52ರಷ್ಟಿತ್ತು.
2020–21ನೇ ವಿತ್ತೀಯ ವರ್ಷಕ್ಕೆ ಹಣಕಾಸು ಕೊರತೆಯನ್ನು ₹ 7.96 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇ 3.5ರಷ್ಟರಲ್ಲಿ ನಿಯಂತ್ರಿಸುವ ಗುರಿಯನ್ನು ಕೇಂದ್ರ ಸರ್ಕಾರ ಇರಿಸಿಕೊಂಡಿದೆ. ಆದರೆ, ಕೋವಿಡ್-19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಈ ಗುರಿ ಮರುಪರಿಶೀಲನೆ ಮಾಡುವ ಸಾಧ್ಯತೆ ಇದೆ. 2019–20ರಲ್ಲಿ 7 ವರ್ಷಗಳ ಗರಿಷ್ಠ ಮಟ್ಟವಾದ ಶೇ 4.6ಕ್ಕೆ ಏರಿಕೆಯಾಗಿತ್ತು. 2020–21ಕ್ಕೆ ಹಣಕಾಸು ಕೊರತೆಯು 13 ಲಕ್ಷ ಕೋಟಿ ರೂ.ಗಳಷ್ಟಾಗಲಿದೆ (ಶೇ 6.7) ಎಂದು ಐಸಿಆರ್‌ಎ ಹೇಳಿದೆ.