ನವದೆಹಲಿ: ಭಯೋತ್ಪಾದಕರಿಗೆ ರಾಜಾರೋಷವಾಗಿ ಸಹಕಾರ ನೀಡುತ್ತ ಬರುತ್ತಿರುವ ಪಾಕಿಸ್ತಾನಕ್ಕೆ, ಉಗ್ರರ ಹಣಕಾಸು ವ್ಯವಸ್ಥೆಯ ಮೇಲೆ ಕಣ್ಗಾವಲು ಇರಿಸುವ ಜಾಗತಿಕ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆಯು (ಎಫ್‌ಎಟಿಎಫ್) ಪಾಕ್ ಅನ್ನು ಕಪ್ಪು ಪಟ್ಟಿಗೆ ಸೇರಿಸುವ ಕಾಲ ಸನಿಹವಾಗಿದೆ.
ಪ್ಯಾರಿಸ್ನಲ್ಲಿ ಅಕ್ಟೋಬರ್ 13ರಿಂದ 16ರವರೆಗೆ ನಡೆಯಲಿರುವ ಎಫ್‌ಎಟಿಎಫ್ ಸಭೆಗೆ ಭಾರತ ಮತ್ತು ಪಾಕಿಸ್ತಾನ ಕಾತುರದಿಂದ ಎದುರು ನೋಡುತ್ತಿವೆ. 2012ರಿಂದ ಗ್ರೇ ಪಟ್ಟಿಯಲ್ಲಿರುವ ಪಾಕಿಸ್ತಾನ, ಉಗ್ರರಿಗೆ ಬೆಂಬಲ ನೀಡುವ ವಿಷಯದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳದೇ ತನ್ನ ಹಿಂದಿನ ಹಾದಿಯಲ್ಲಿ ಸಾಗುತ್ತಿದೆ. ಹೀಗಾಗಿ, ಕಪ್ಪು ಪಟಿಗೆ ಸೇರುವ ಲಕ್ಷಣಗಳು ದಟ್ಟವಾಗಿವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರೆಸಲ್ಯೂಷನ್ 1267 ಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವಲ್ಲಿ ಪಾಕ್ ಸೋತಿದೆ. ಭಯೋತ್ಪಾನೆ ಹಣಕಾಸು ವ್ಯವಸ್ಥೆಯ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಯಾವುದೇ ಸ್ಪಷ್ಟ ನಡ ನೀಡಿಲ್ಲ. ಪಾಕ್ ಜೊತೆಗೆ ಉತ್ತರ ಕೊರಿಯಾ, ಇರಾನ್ ಕೂಡ ಕಪ್ಪು ಪಟಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಅಕ್ರಮ ಹಣಕಾಸು ವರ್ಗಾವಣೆಯಂತಹ ದೃಷ್ಕೃತ್ಯಗಳನ್ನು ತಡೆಯಲು 1989ರಲ್ಲಿ ಜಿ-7 ರಾಷ್ಟ್ರಗಳು ಒಗ್ಗೂಡಿ ಪ್ಯಾರಿಸ್ನಲ್ಲಿ ಎಫ್‌ಎಟಿಎಫ್ ಜಾರಿಗೆ ತಂದವು. ಭಾರತದ ಸೇರಿದಂತೆ 37 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಭಯೋತ್ಪಾದನೆ ಸಂಬಂಧಿತ ಹಣಕಾಸು ವ್ಯವಸ್ಥೆಯ ಮೇಲೆ ಇದು ಕಣ್ಗಾವಲು ಇರಿಸುತ್ತದೆ.
ಎಫ್‌ಎಟಿಎಫ್ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿದರೇ ಏನಾಗಲಿದೆ?
* ಈಗಾಗಲೇ ಆರ್ಥಿಕ ಕುಸಿತದಿಂದ ಅಳಿವಿನ ಅಂಚಿಗೆ ಬಂದು ತಲುಪಿದ ಪಾಕ್ಗೆ ತೀವ್ರವಾದ ಹಣಕಾಸಿನ ಹೊಡೆತ ಬೀಳಲಿದೆ. ಹೂಡಿಕೆದಾರರು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಪಾಕಿಸ್ತಾನದಿಂದ ಹೊರಬರಲಿವೆ. ಜೊತೆಗೆ ತಮ್ಮ ಬಂಡವಾಳ ಹಿಂದಕ್ಕೆ ತೆಗೆದುಕೊಳ್ಳಲಿದ್ದಾರೆ. ಜೊತೆಗೆ ಪಾಕ್ನ ಆಪ್ತ ರಾಷ್ಟ್ರಗಳು ಸಹ ಅಂತರ ಕಾಯ್ದುಕೊಂಡು ವ್ಯಾಪಾರ- ಸ್ನೇಹ ಸಂಬಂಧಕ್ಕೆ ಅಲ್ಪ ಹಿನ್ನಡೆ ಆಗಬಹುದು.
* ವಿದೇಶಿ ಕರೆನ್ಸಿಯ ವಹಿವಾಟು ಮತ್ತು ವಿದೇಶಿ ಬಂಡವಾಳದ ಒಳಹರಿಯು ಭಾರಿ ಪ್ರಮಾಣದಲ್ಲಿ ಕುಸಿತ ಕಾಣಲಿದೆ. ಇದರಿಂದ ಪಾಕ್ ಆರ್ಥಿಕತೆ ಇನ್ನಷ್ಟು ಕುಸಿಯಲಿದೆ
* ಷೇರು ಮಾರುಕಟ್ಟೆ ಕುಸಿತಗೊಂಡು ಫಾರೆಕ್ಸ್ ಮಾರುಕಟ್ಟೆಯ ಸಂಪತ್ತು ವೇಗವಾಗಿ ಕರಗಲಿದೆ
* ಪಾಕ್ ಕರೆನ್ಸಿ ಅಪಮೌಲ್ಯೀಕರಣಕ್ಕೆ ಒಳಗಾಗಿ ಅದರ ಮೌಲ್ಯ ಪಾತಾಳಕ್ಕೆ ಕುಸಿಯಲಿದೆ
* ಹಣದುಬ್ಬರ ತೀವ್ರವಾಗಿ ಏರಿಕೆಯಾಗಿ ಸಾರ್ವಜನಿಕರಲ್ಲಿ ಶಾಂತಿ ಕದಡಿ ಗಂಭೀರವಾದ ಪರಿಣಾಮಗಳು ಎದುರಿಸಬೇಕಾಗುತ್ತದೆ
* ಪಾಕಿಸ್ತಾನದೊಂದಿಗೆ ವ್ಯಾಪಾರ ನಡೆಸುವ ದೇಶಗಳ ಮೇಲೆ ನಿರ್ಬಂಧ ವಿಧಿಸಬಹುದು
* ದೇಶಕ್ಕೆ ಹೊರಗಿನಿಂದ ಬರುವ ಸಾಲ, ಸಹಾಯ ಧನ ಸ್ಥಗಿತಗೊಳ್ಳಲಿವೆ
* ವ್ಯಾಪಾರವು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ