ನವದೆಹಲಿ: 2021ರ ಜನವರಿ 1ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕ ಪಾವತಿಸಲು ಅನುಕೂಲವಾಗುವ ಫಾಸ್ಟ್‌ಟ್ಯಾಗ್ ಅನ್ನು 2016ರಲ್ಲಿ ಪರಿಚಯಿಸಲಾಯಿತು. 'ಹೊಸ ವರ್ಷದಿಂದ ದೇಶದ ಎಲ್ಲ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲಾಗುತ್ತಿದೆ' ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರೀಯ ಮೋಟಾರು ವಾಹನ ನಿಯಮ 1989ರ ಪ್ರಕಾರ, 2017ರಿಂದೀಚೆಗೆ ಯಾವುದೇ ಹೊಸ ನಾಲ್ಕು ಚಕ್ರದ ವಾಹನಗಳ ನೋಂದಣಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಅದನ್ನು ವಾಹನ ಉತ್ಪಾದಕರು ಅಥವಾ ಡೀಲರ್ಗಳು ಪೂರೈಸಬೇಕು. ಅಲ್ಲದೇ, ಸಾರಿಗೆ ವಾಹನಗಳ ಕ್ಷಮತಾ ಪತ್ರ (ಫಿಟ್ನೆಸ್ ಸರ್ಟಿಫಿಕೆಟ್) ನವೀಕರಣಕ್ಕೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ: ₹ 9,500 ಕೋಟಿ ಮೌಲ್ಯದ ಷೇರು ಮರು ಖರೀದಿಸಲಿರುವ ವಿಪ್ರೋ: ಪ್ರತಿ ಷೇರು ಬೆಲೆ ಎಷ್ಟು ಗೊತ್ತೇ?
ಗುರುವಾರ ವರ್ಚುಯಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗಡ್ಕರಿ, ಪ್ರಯಾಣಿಕರಿಗೆ ಫಾಸ್ಟ್‌ಟ್ಯಾಗ್ ಉಪಯುಕ್ತವಾಗಲಿದೆ. ನಗದು ಪಾವತಿಗಾಗಿ ಟೋಲ್ ಪ್ಲಾಜಾಗಳಲ್ಲಿ ನಿಲ್ಲಬೇಕಾಗಿಲ್ಲ. ಇದರಿಂದ ಸಮಯ ಮತ್ತು ಇಂಧನವನ್ನೂ ಉಳಿಸಲು ನೆರವಾಗುತ್ತದೆ ಎಂದು ಹೇಳಿದರು.
ಭಾರತದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ 537 ಟೋಲ್ ಪ್ಲಾಜಾಗಳಲ್ಲಿ ಟ್ಯಾಗ್‌ಗಳಿಲ್ಲದೇ ವೇಗದ ಲೇನ್‌ಗಳ ಮೂಲಕ ಪ್ರಯಾಣಿಸಿದರೆ ಜನವರಿ 1ರಿಂದ ಟೋಲ್ ಮೊತ್ತದ ದ್ವಿಗುಣ ಹಣ ದಂಡವಾಗಿ ವಿಧಿಸಲಾಗುತ್ತದೆ.