ಮುಂಬೈ: 'ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂಬ ಘೋಷಣೆ ನನಗೆ ಆರ್ಥಿಕ ಮರಣ ದಂಡನೆ ವಿಧಿಸಿದಂತಿದೆ' ಎಂದು ಲಂಡನ್‍ನಲ್ಲಿ ತಲೆಮರೆಸಿಕೊಂಡಿದ್ದ ಮದ್ಯದ ದೊರೆ ವಿಜಯ್ ಮಲ್ಯ ಮುಂಬೈ ಹೈಕೋರ್ಟ್ಗೆ ವಕೀಲರ ಮೂಲಕ ಅಳಲು ತೋಡಿಕೊಂಡಿದ್ದಾರೆ.
ದೇಶದ ವಿವಿಧ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ತೆಗೆದುಕೊಂಡು ಪಾವತಿಸದೆ ದೇಶ ದೊರೆದಿರುವ ಮಲ್ಯ ಅವರನ್ನು 'ಆರ್ಥಿಕ ಅಪರಾಧಿ' ಎಂದು ಘೋಷಿಸುವಂತೆ ED ಕೋರಿಕೊಂಡಿತ್ತು. ಅಕ್ರಮ ಹಣ ರವಾನೆ ತಡೆ ಕಾಯ್ದೆಯಡಿ ರೂಪಿಸಲಾದ ವಿಶೇಷ ನ್ಯಾಯಾಲಯ (ಪಿಎಂಎಲ್‌ಎ ವಿಶೇಷ ಕೋರ್ಟ್) ಮನವಿ ಆಲಿಸಿ, ಉದ್ಯಮಿಯನ್ನು 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಎಂದು ಘೋಷಿಸಿದೆ.
ನ್ಯಾಯಮೂರ್ತಿ ರಂಜಿತ್ ಮೋರ್ ಹಾಗೂ ಭಾರತಿ ಡಾಂಗ್ರೆ ಅವರಿದ್ದ ನ್ಯಾಯಪೀಠದ ಮುಂದೆ ವಿಜಯ್ ಮಲ್ಯ ಅವರು, ವಕೀಲ ಅಮಿತ್ ದೇಸಾಯಿ ಮೂಲಕ, 'ದೇಶಭ್ರಷ್ಟ ಆರ್ಥಿಕ ಅಪರಾಧಿ ಘೋಷಣೆ ನನಗೆ ಆರ್ಥಿಕ ಮರಣದಂಡನೆ ವಿಧಿಸಿದಂತೆ ಇದೆ' ಎಂದು ನೋವು ವ್ಯಕ್ತಪಡಿಸಿದ್ದಾರೆ.
'ನನ್ನ ಸಾಲ ಹಾಗೂ ಋಣಭಾರದ ಮೇಲಿನ ಬಡ್ಡಿದರ ಏರಿಕೆ ಆಗುತ್ತಿದೆ. ಈ ಸಾಲ ತೀರಿಸಲು ನನ್ನ ಬಳಿ ಸ್ವತ್ತುಗಳು ಇದ್ದರೂ ಸರ್ಕಾರ ಅವುಗಳ ಬಳಕೆಗೆ ಅನುಮತಿ ನೀಡುವುದಿಲ್ಲ. ನನ್ನ ಆಸ್ತಿಯ ಮೇಲೆ ನನಗೆ ಯಾವುದೇ ನಿಯಂತ್ರಣವಿಲ್ಲ' ಎಂದು ಹೇಳಿಕೆ ನೀಡಿದ್ದಾರೆ.
ದೇಶಾದ್ಯಂತ ಇರುವ ಮಲ್ಯ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಮಧ್ಯಂತರ ಪರಿಹಾರ ನೀಡುವಂತೆ ದೇಸಾಯಿ ಅವರು ಕೋರಿದ್ದರೂ ನ್ಯಾಯಪೀಠ ಪರಿಹಾರ ನೀಡಲು ನಿರಾಕರಿಸಿತು.
ಅಕ್ರಮ ಹಣ ರವಾನೆ ತಡೆ ಕಾಯ್ದೆಯು ಕಠಿಣ ಹಾಗೂ ಅಸಾಂವಿಧಾನಿಕವಾಗಿದೆ. ಆರೋಪಿ ಅಪರಾಧ ಕೃತ್ಯ ಅಥವಾ ಆದಾಯ ಮೂಲಗಳಿಂದ ಆಸ್ತಿಯನ್ನು ಖರೀದಿಸಿದ್ದಾನೆ ಎಂಬುದನ್ನು ಖಚಿತಗೊಳ್ಳುವ ಮೊದಲೇ ಎಲ್ಲ ಆಸ್ತಿಯನ್ನೂ ವಶಪಡಿಸಿಕೊಳ್ಳಲು ಅನುಮತಿಸುತ್ತದೆ ಎಂದು ದೇಸಾಯಿ ವಾದಿಸಿದರು.
ಈ ಕಾಯ್ದೆ ಕಠಿಣವಾಗಿಲ್ಲ, ಇದು ಸ್ವತಃ ಕಾನೂನಿನಡಿ ಕ್ರಮ ಕೈಗೊಳ್ಳುವುದಿಲ್ಲ. ಎಲ್ಲ ವಾದಗಳನ್ನು ಆಲಿಸದ ಬಳಿಕ ನ್ಯಾಯಾಲಯ ಜಾರಿಗೊಳಿಸಿದ ನಿಯಮಕ್ಕೆ ಬದ್ಧವಾಗಿ ಆರೋಪಿಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಇದು ಸಾಮಾನ್ಯ ಕಾನೂನು ಅಲ್ಲ. ಮಲ್ಯ ಅಂಥವರಿಗೆ ಅನ್ವಯಿಸುವಂಥ ಕಾನೂನಾಗಿದೆ. ₹ 100 ಕೋಟಿಗೂ ಅಧಿಕ ಮೊತ್ತದ ಹಣ ವಂಚಿಸಿದವರನ್ನು ಕಾಯ್ದೆಯಡಿ ತರಲು ಉದ್ದೇಶಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಕೌನ್ಸಿಲ್ ಡಿ.ಪಿ. ಸಿಂಗ್ ಪ್ರತ್ಯುತ್ತರ ನೀಡಿದ್ದಾರೆ.