ಚೆನ್ನೈ: ಭಾರತದ ಆರ್ಥಿಕತೆಯು ಐಸಿಯುನಲ್ಲಿದೆ ಎಂಬ ಪದವನ್ನು ನಾನು ಬಳಸಿಲ್ಲ. ವಾಸ್ತವವಾಗಿ, ಇದನ್ನು ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಆಗಿದ್ದ ಡಾ.ಅರವಿಂದ್ ಸುಬ್ರಮಣಿಯನ್ ಅವರು ತಮ್ಮ ಸಂದರ್ಶನದಲ್ಲಿ ಬಳಸಿದ್ದರು ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸ್ಪಷ್ಟನೆ ನೀಡಿದರು.
'ಈಟಿವಿ ಭಾರತ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಐಸಿಯು ಎಂಬ ಪದವನ್ನು ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಡಾ ಅರವಿಂದ್ ಸುಬ್ರಮಣಿಯನ್ ಅವರು ಬಳಸಿದ್ದರು. ಈ ಪದ ನಾನು ಬಳಸಿಲ್ಲ. ಸುಬ್ರಮಣಿಯನ್ ಹೇಳಿಕೆಗೆ ಸರ್ಕಾರ ಉತ್ತರ ನೀಡಬೇಕು ಎಂದು ಹಣಕಾಸು ಸಚಿವರಿಗೆ ಹಿಂದೆ ಮನವಿ ಮಾಡಿದ್ದೆ. ಆದರೆ, ಅವರು ಅದಕ್ಕೆ ಉತ್ತರಿಸಲಿಲ್ಲ ಎಂದರು.
ಈ ಸರ್ಕಾರ ನೈಜ ಸಂಗತಿ ಮತ್ತು ಅಂಕಿ ಅಂಶಗಳೊಂದಿಗೆ ವ್ಯವಹರಿಸಲು ಸಿದ್ಧವಿಲ್ಲ. ಆದರೆ, ಅವರು ಆರ್ಥಿಕತೆ ಸದೃಢವಾಗಿದೆ ಎಂದು ಹೇಳುತ್ತಿದ್ದರೆ. ಈ ಬಗ್ಗೆ ನನಗೆ ಭಯ ಆಗುತ್ತಿದೆ. ಇದನ್ನು ಸರ್ಕಾರ ಮಾತ್ರವೇ ನಂಬಬೇಕು. ಆರ್ಥಿಕತೆ ಉತ್ತಮವಾಗಿದೆ ಎಂಬುದನ್ನು ಯಾರೂ ನಂಬಲ್ಲ ಎಂದರು.
ಕಾರ್ಪೊರೇಟ್ ತೆರಿಗೆ ಕಡಿತ ಮಾಡಿದ ಮಾತ್ರಕ್ಕೆ ಅದೊಂದು ಸುಧಾರಣೆ ಆಗಲ್ಲ. ಇದೊಂದು ತಪ್ಪು ನಿರ್ಧಾರ. ಜನರಲ್ಲಿ ಖರೀದಿಯ ಶಕ್ತಿ ಇಲ್ಲವಾಗಿದೆ. ತೆರಿಗೆ ಕಡಿತ ಮಾಡುವುದಾದರೇ
ಪರೋಕ್ಷ ತೆರಿಗೆ ಕಡಿತ ಮಾಡಿದರೇ ಇನ್ನೂ ಉತ್ತಮವಾಗಿರುತ್ತಿತ್ತು ಎಂದು ಹೇಳಿದರು.
ಸರ್ಕಾರ ನೀಡುತ್ತಿರುವ ಮಾಹಿತಿಯ ಬಗ್ಗೆ ವಿಶ್ವಾಸಾರ್ಹತೆಯ ಪ್ರಶ್ನೆ ಮೂಡುತ್ತಿದೆ. ನಿರುದ್ಯೋಗದ ಬಗ್ಗೆ ಎನ್‌ಎಸ್‌ಎಸ್‌ಒ ದತ್ತಾಂಶಗಳನ್ನು ಮರೆಮಾಚಲಾಗಿದೆ ಗ್ರಾಮೀಣ ಭಾಗದಲ್ಲಿ ಉಪಭೋಗದ ಪ್ರಮಾಣ ಕುಸಿದಿದೆ ಎಂಬುದು ಸಹ ಸಮೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದರು.
ಅನುತ್ಪಾದಕ ಆಸ್ತಿಯಲ್ಲಿ ಹೇಳಿಕೊಳ್ಳುವಂತಹ ಇಳಿಕೆಯೇನು ಕಂಡು ಬಂದಿಲ್ಲ. 'ಎನ್ಪಿಎ ಮುಂದಿನ 6 ತಿಂಗಳಲ್ಲಿ ಏರಿಕೆಯಾಗಲಿದೆ' ಎಂದು ಆರ್ಬಿಐ ಕೆಲ ದಿನಗಳ ಹಿಂದೆ ಆರ್ಬಿಐ ವರದಿ ಮಾಡಿತ್ತು. ಈ ಹಿಂದಿನ ಕೆಲವು ವರ್ಷಗಳಲ್ಲಿ 3ರಿಂದ 4 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ ಡೇಟಾ ವರದಿಯನ್ನು ಚಿದಂಬರಂ ಉಲ್ಲೇಖಿಸಿದರು.
ಆದಾಯ ತೆರಿಗೆ ಕಡಿತಕ್ಕೆ ಇದು ಸರಿಯಾದ ಸಮಯವಲ್ಲ. ನೀವು ತೆರಿಗೆ ಕಡಿತ ಮಾಡಲೇಬೇಕಾದರೇ ಪರೋಕ್ಷ ತೆರಿಗೆಯ ಹೊರೆಯನ್ನು ಇಳಿಸಿ. ಖಾಸಗಿ ವಲಯದಲ್ಲಿ ದೊಡ್ಡ ಪ್ರಮಾಣದ ನೇಮಕವನ್ನು ನಾನು ಇದುವರೆಗೂ ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.