ನವದೆಹಲಿ : ದೇಶೀಯವಾಗಿ ತಯಾರಿಸಿದ ವೆಂಟಿಲೇಟರ್‌ಗಳನ್ನು ರಫ್ತು ಮಾಡಲು ಅನುಮತಿ ನೀಡುವ ಆರೋಗ್ಯ ಸಚಿವಾಲಯದ ಪ್ರಸ್ತಾಪಕ್ಕೆ ಕೋವಿಡ್-19 ಕುರಿತು ಉನ್ನತ ಮಟ್ಟದ ಮಂತ್ರಿಗಳ ಗುಂಪು (ಜಿಒಎಂ) ಸಮ್ಮತಿಸಿದೆ.
ಕೋವಿಡ್-19 ರೋಗಿಗಳು ಭಾರತದಲ್ಲಿ ಕ್ರಮೇಣ ಕಡಿಮೆ ಆಗುತ್ತಿರುವ ಪ್ರಮಾಣವನ್ನು ಕಾಯ್ದುಕೊಳ್ಳುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಒಟ್ಟಾರೆ ಸೋಂಕಿತ ಸಕ್ರಿಯ ಪ್ರಕರಣಗಳ ಪೈಕಿ ಶೇ 2.15ರಷ್ಟು ಮಾತ್ರವೇ ವೆಂಟಿಲೇಟರ್‌ಗಳ ಮೇಲೆ ಅವಲಂಬಿತವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಜುಲೈ 31ರ ವೇಳೆಗೆ ದೇಶಾದ್ಯಂತ ವೆಂಟಿಲೇಟರ್‌ಗಳ ಮೇಲೆ ಅವಲಂಬನೆ ಆಗಿದ್ದು, ಕೇವಲ 0.22ರಷ್ಟು ಸಕ್ರಿಯ ಪ್ರಕರಣ ದಾಖಲಾಗಿವೆ ಎಂದಿದೆ.
ದೇಶೀಯವಾಗಿ ತಯಾರಿಸಿದ ವೆಂಟಿಲೇಟರ್‌ಗಳ ರಫ್ತಿಗೆ ಅನುಕೂಲ ಆಗುವಂತೆ ಮುಂದಿನ ಕ್ರಮ ಕೈಗೊಳ್ಳಲು ಜಿಒಎಂ ತನ್ನ ನಿರ್ಧಾರವನ್ನು ವಿದೇಶಿ ವ್ಯಾಪಾರ ಮಹಾನಿರ್ದೇಶಕರಿಗೆ (ಡಿಜಿಎಫ್‌ಟಿ) ತಿಳಿಸಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಈಗ ವೆಂಟಿಲೇಟರ್‌ಗಳ ರಫ್ತಿಗೆ ಅವಕಾಶ ಇರುವುದರಿಂದ, ದೇಶೀಯ ವೆಂಟಿಲೇಟರ್‌ಗಳು ವಿದೇಶಗಳಲ್ಲಿ ಹೊಸ ಮಾರುಕಟ್ಟೆಗಳನ್ನು ಹುಡುಕುವ ಸ್ಥಿತಿಯಲ್ಲಿವೆ ಎಂದು ಆಶಿಸಲಾಗಿದೆ. ಜನವರಿ ತಿಂಗಳಿಗೆ ಹೋಲಿಸಿದರೆ, ದೇಶೀಯ ವೆಂಟಿಲೇಟರ್‌ಗಳ ತಯಾರಕರೂ 20ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕೋವಿಡ್-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಹಾಗೂ ಯಂತ್ರಗಳ ದೇಶೀಯ ಲಭ್ಯತೆ ಖಚಿತಪಡಿಸಿಕೊಳ್ಳಲು ಮಾರ್ಚ್‌ನಲ್ಲಿ ವೆಂಟಿಲೇಟರ್‌ಗಳ ರಫ್ತಿಗೆ ನಿಷೇಧ ಹೇರಲಾಯಿತು. ಮಾರ್ಚ್ 24ರಿಂದ ಜಾರಿಗೆ ಬರುವಂತೆ ಎಲ್ಲಾ ರೀತಿಯ ವೆಂಟಿಲೇಟರ್‌ಗಳನ್ನು ರಫ್ತು ನಿಷೇಧದಡಿ ಇರಲಿವೆ ಎಂದು ಡಿಜಿಎಫ್‌ಟಿ ಅಧಿಸೂಚನೆ ನೀಡಿತ್ತು.