ನವದೆಹಲಿ : 6 ತಿಂಗಳ ನಿಷೇಧದ ಅವಧಿಯಲ್ಲಿ ಎಂಎಸ್‌ಎಂಇ ಮತ್ತು 2 ಕೋಟಿ ರೂ.ವರೆಗೆ ಚಕ್ರ ಬಡ್ಡಿ ಮನ್ನಾ ಮಾಡಲು ಸಿದ್ಧ ಎಂದು ಕೇಂದ್ರ ಹಣಕಾಸು ಸಚಿವಾಲಯ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.
ಇಎಂಐ ಮುಂದೂಡಿಕೆ ಅವಧಿಯ ಮಾಸಿಕ ಕಂತು ಹಾಗೂ ಬಡ್ಡಿಯ ಮೇಲಿನ ಬಡ್ಡಿ (ಚಕ್ರ ಬಡ್ಡಿ) ಮನ್ನಾ ಮಾಡಲಾಗುವುದು. ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನಲ್ಲಿ ಸರ್ಕಾರ ಮಾತ್ರವೇ ಈ ಹೊರೆ ಹೊರಬಲ್ಲದು ಎಂದು ಕೇಂದ್ರ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ. ಇದಕ್ಕೆ ಅನುದಾನ ಪಡೆಯಲು ಸಂಸತ್ತಿನ ಅನುಮೋದನೆ ಪಡೆದುಕೊಳ್ಳಲಾಗುತ್ತದೆ ಎಂದಿದೆ.
ಎಂಎಸ್‌ಎಂಇ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ಸಾಲ, ಶೈಕ್ಷಣಿಕ ಸಾಲ, ವಸತಿ ಸಾಲ, ಸರಕುಗಳ ಮೇಲಿನ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಗೆ ಈ ಬಡ್ಡಿ ಮನ್ನಾ ಸೌಲಭ್ಯ ದೊರೆಯಲಿದೆ.
ಆರ್‌ಬಿಐ ಘೋಷಿಸಿದ ನಿಷೇಧದ ಅವಧಿಯಲ್ಲಿ ಸಾಲಗಳ ಮೇಲಿನ ಚಕ್ರ ಬಡ್ಡಿ ಮನ್ನಾ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯೊಂದರ ಪ್ರತಿಕ್ರಿಯೆಗೆ ಕೇಂದ್ರದ ಈ ನಿಲುವು ಹೊರ ಬಂದಿದೆ. ಈ ಪ್ರಕರಣದ ವಿಚಾರಣೆಯ ವೇಳೆ ಇದು ಬ್ಯಾಂಕ್ಗಳ ಮೇಲೆ ಆರ್ಥಿಕ ಹೊರೆಗೆ ಕಾರಣವಾಗಲಿದೆ ಎಂದು ಸರ್ಕಾರ ಆರಂಭದಲ್ಲಿ ವಿರೋಧಿಸಿತ್ತು.
ಕೇಂದ್ರೀಯ ಬ್ಯಾಂಕ್ ಆರ್‌ಬಿಐ ಹಿಂದೆ ಅವಿತುಕೊಳ್ಳಬಾರದು ಎಂದು ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಮಾಜಿ ಸಿಎಜಿ ರಾಜೀವ್ ಮಹ್ರಿಶಿ ನೇತೃತ್ವದ ಸಮಿತಿಯನ್ನು ಕೇಂದ್ರ ರಚಿಸಿತ್ತು.
ಬ್ಯಾಂಕ್ಗಳು ಈ ಹೊರೆ ಭರಿಸಬೇಕಾದ್ರೆ, ಅದು ಅಗತ್ಯ ಅವರ ನಿವ್ವಳ ಮೌಲ್ಯದ ಗಣನೀಯ ಮತ್ತು ಪ್ರಮುಖ ಭಾಗವನ್ನೇ ಅಳಿಸಿ ಹಾಕುತ್ತದೆ. ಹೆಚ್ಚಿನ ಬ್ಯಾಂಕ್ಗಳನ್ನು ಅಸಮರ್ಥವಾಗಿಸುತ್ತದೆ. ಅವರ ಉಳಿವಿನ ಬಗ್ಗೆ ಬಹಳ ಗಂಭೀರ ಪ್ರಶ್ನೆ ಮೂಡುತ್ತದೆ. ಬಡ್ಡಿ ಮನ್ನಾ ಆಲೋಚಿಸದ ಕಾರಣ ಕಂತುಗಳ ಪಾವತಿ ಮಾತ್ರ ಮುಂದೂಡಲಾಗಿದೆ ಎಂದು ಕೇಂದ್ರ ವಿವರಿಸಿದೆ.