ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸುವ ಸರ್ಕಾರದ ಕ್ರಮ ವಿರೋಧಿಸಿ ನಾಲ್ಕು ಬ್ಯಾಂಕ್ ಅಧಿಕಾರಿಗಳ ಸಂಘಗಳು ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿವೆ.
ಸೆಪ್ಟೆಂಬರ್ 26 ಮತ್ತು 27ರಂದು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್ಬಿಒಸಿ) ಮತ್ತು ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ಅಧಿಕಾರಿಗಳ (ನೊಬೊ) ಜಂಟಿಯಾಗಿ ಮುಷ್ಕರ ನಡೆಸಲಿವೆ.
ಬ್ಯಾಂಕಿಂಗ್ ಉದ್ಯಮವನ್ನು ಸಂಪೂರ್ಣವಾಗಿ ಮುಚ್ಚುವ 48 ಗಂಟೆಗಳ ಈ ಮುಷ್ಕರಕ್ಕೆ ಇತರ ಅನೇಕ ಸಂಘಗಳು ಮತ್ತು ಸಂಸ್ಥೆಗಳು ತಮ್ಮೊಂದಿಗೆ ಸೇರಿಕೊಳ್ಳಲಿವೆ ಎಂದು ಸಂಘಟನೆಗಳು ತಿಳಿಸಿವೆ.
ಆಗಸ್ಟ್ 30ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾರ್ವಜನಿಕ ಸ್ವಾಮ್ಯದ 10 ಬ್ಯಾಂಕ್ಗಳನ್ನು ನಾಲ್ಕು ಹಂತದಲ್ಲಿ ವಿಲೀನಗೊಳಿಸುವುದಾಗಿ ಹೇಳಿದ್ದರು.