ನವದೆಹಲಿ: ಮನವೊಲಿಸುವ ದೃಷ್ಟಿಕೋನದ ಕೊರತೆ ಮತ್ತು ಪ್ರಸ್ತುತ ಸರ್ಕಾರದಲ್ಲಿನ ಅಧಿಕಾರದ ಕೇಂದ್ರೀಕರಣವು ಇಂದಿನ ಆರ್ಥಿಕ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಬ್ರೌನಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಒ.ಪಿ. ಜಿಂದಾಲ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುಸಂಖ್ಯಾತ ಮತ್ತು ಸರ್ವಾಧಿಕಾರ ನೀತಿಯು ಭಾರತವನ್ನು ಕರಾಳ ಮತ್ತು ಅನಿಶ್ಚಿತ ದಾರಿಯತ್ತ ತಳುತ್ತಿದೆ. ಸರ್ಕಾರದ ಆರ್ಥಿಕ ಆದ್ಯತೆಗಳು ಸ್ಥಿರವಾಗಿಲ್ಲ. ಈಗಿನ ವ್ಯವಸ್ಥೆಯು ಹೊರಗಿನ ಜನರನ್ನು ಸ್ವೀಕರಿಸಲು ಸಿದ್ಧವಿಲ್ಲ. ಆದರೆ, ಬ್ಯಾಂಕಿಂಗ್‌ನಂತಹ ಕ್ಷೇತ್ರಗಳಿಗೆ ಹೊರಗಿನ ಪರಿಣಿತರ ಅಗತ್ಯವಿದೆ ಎಂದಿದ್ದಾರೆ.
ಇತ್ತೀಚಿನ ಕಾರ್ಪೊರೇಟ್ ತೆರಿಗೆ ದರ ಕಡಿತವು ಪ್ರಯೋಜನಕಾರಿಯಾಗಿದೆ. ಆದರೆ, ತೆರಿಗೆ ಆಡಳಿತದಲ್ಲಿನ ಬದಲಾವಣೆಗಳ ಯಥಾವತ್ತಾಗಿವೆ. ನಮಗೆ ಹಿಂದಕ್ಕೆ ಮತ್ತು ಮುಂದಕ್ಕೆ ಹೋಗುವ ಅಭ್ಯಾಸವಿದೆ. ಸುಧಾರಣೆಗಳ ಹೊರತಾಗಿಯೂ ಎಫ್‌ಡಿಐ ಮಟ್ಟದಲ್ಲಿ ಹೆಚ್ಚು ಬದಲಾವಣೆ ಕಂಡುಬಂದಿಲ್ಲ ಎಂದರು.
ಬ್ಯಾಂಕ್ಗಳ ವಿಲೀನ ಸರಿಯಾದ ದಿಕ್ಕಿನಲ್ಲಿದೆ. ಆದರೆ, ಅದು ಸರಿಯಾದ ಸಮಯದಲ್ಲಿ ಅನುಷ್ಠಾನ ಆಗಿಲ್ಲ. ನಿಧಾನಗತಿಯ ಆರ್ಥಿಕತೆ ಮತ್ತು ಬ್ಯಾಂಕ್ಗಳಲ್ಲಿ ಹೆಚ್ಚಿನ ಪ್ರಮಾಣದ ಎನ್ಪಿಎ ಇರುವಾಗ ವಿಲೀನ ಘೋಷಣೆಯಾಗಿದೆ. ಉತ್ತಮ ಸಾಲ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುವ ಬ್ಯಾಂಕ್ಗಳಿಗೆ ಈ ವಿಲೀನವು ಮುಂದಿನ ದಿನಗಳಲ್ಲಿ ಮುಳುವಾಗಲಿದೆ ಎಂದರು.
ಪ್ರಧಾನಿ ಮೋದಿ, ಮಾಜಿ ಪಿಎಂ ಡಾ. ಮನಮೋಹನ್ ಸಿಂಗ್ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯ ಬಗ್ಗೆ ಮಾತನಾಡಿರುವ ರಘುರಾಮ್ ಅವರು, ವಾಜಪೇಯಿ ಅವರ ಮಧ್ಯಂತರ ವ್ಯವಸ್ಥೆಯ ಆಡಳಿತದ ನಡೆಯನ್ನು ಪ್ರಶಂಸಿದರು. 'ಮೋದಿ ಆಡಳಿತದಲ್ಲಿ ಪಿಎಂಒ (ಪ್ರಧಾನಮಂತ್ರಿಗಳ ಕಚೇರಿ) ಅಧಿಕಾರಕ್ಕಾಗಿ ಕೇಂದ್ರೀಕರಣಗೊಂಡಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಯುಪಿಎ- 1 ಮತ್ತು 2ರಲ್ಲಿ ಅಧಿಕಾರದ ವಿಕೇಂದ್ರೀಕರಣವಿತ್ತು. ನನಗೆ ಇವು ಎರಡೂ ಒಳ್ಳೆಯದಲ್ಲ ಎನಿಸುತ್ತಿದೆ.
ಈ ಎರಡರಲ್ಲಿ ನಮಗೆ ಬೇಕಾಗಿರುವುದು ಮಧ್ಯದ ಹಾದಿ. ಅದು ವಾಜಪೇಯಿ ಆಡಳಿತದ ಮಾದರಿ. ಅಲ್ಲಿ ಸಚಿವಾಲಯಗಳು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿದ್ದವು. ಆದರೆ, ಪಿಎಂಒ ದುರ್ಬಲವಾಗಿರಲಿಲ್ಲ. ಇಂದು ನಮ್ಮಲ್ಲಿರುವ ಪಿಎಂಒ ನೇರವಾಗಿ ಸಚಿವರ ಮುಖೇನ ಅಧಿಕಾರಿಗಳೊಂದಿಗೆ ವ್ಯವಹರಿಸುತ್ತಿದೆ. ಇಂತಹ ಸಮಾನಾಂತರ ಭ್ರಷ್ಟಾಚಾರ ವಿರೋಧಿ ನಡೆಯಿಂದಾಗಿ ಅಧಿಕಾರಿಗಳು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರುತ್ತಾರೆ ಎಂದು ರಾಜನ್ ವಿಶ್ಲೇಷಿಸಿದ್ದಾರೆ.