ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕೃಷಿ ಸರಕುಗಳ ರಫ್ತು ಶೇ 43.4ರಷ್ಟು ಏರಿಕೆ ಕಂಡು 53,626.6 ಕೋಟಿ ರೂ.ಗೆ ತಲುಪಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಶನಿವಾರ ತಿಳಿಸಿದೆ.
2019-20ರ ಆರ್ಥಿಕ ವರ್ಷದ ಏಪ್ರಿಲ್ - ಸೆಪ್ಟೆಂಬರ್ ಅವಧಿಯಲ್ಲಿ ಕೃಷಿ ರಫ್ತು 37,397.3 ಕೋಟಿ ರೂ.ಯಷ್ಟಾಗಿದೆ. 2020ರ ಸೆಪ್ಟೆಂಬರ್ನಲ್ಲಿ ಕೃಷಿ ರಫ್ತು ಶೇ 81ರಷ್ಟು ಏರಿಕೆಯಾಗಿ 9,296 ಕೋಟಿ ರೂ.ಗೆ ತಲುಪಿದೆ. 2019ರ ಇದೇ ತಿಂಗಳಲ್ಲಿ 5,114 ಕೋಟಿ ರೂ.ಗಳಷ್ಟಿತ್ತು.
ಕೃಷಿ ರಫ್ತು ಹೆಚ್ಚಿಸಲು ಸರಕಾರದ ಸತತ ಮತ್ತು ಸಂಘಟಿತ ಪ್ರಯತ್ನಗಳು ಫಲ ನೀಡುತ್ತಿವೆ. ಕೋವಿಡ್-19 ಬಿಕ್ಕಟ್ಟಿನ ಹೊರತಾಗಿಯೂ 2020ರ ಏಪ್ರಿಲ್ - ಸೆಪ್ಟೆಂಬರ್ ಅವಧಿಗೆ ಅಗತ್ಯ ಕೃಷಿ ಸರಕುಗಳ ರಫ್ತು ಶೇ 43.4ರಷ್ಟು ಹೆಚ್ಚಳಗೊಂಡು 53,626.6 ಕೋಟಿ ರೂ.ಗೆ ಏರಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ವರ್ಷದ ಹಿಂದಿನಿಂದ ಹಣಕಾಸು ವರ್ಷದ ಸೆಪ್ಟೆಂಬರ್ ಮಾಸಿಕಕ್ಕಿಂತ ಈ ವರ್ಷದ ಏಪ್ರಿಲ್ನಲ್ಲಿ ನೆಲಗಡಲೆ (ಶೇ 35), ಸಂಸ್ಕರಿಸಿದ ಸಕ್ಕರೆ (ಶೇ104), ಗೋಧಿ (ಶೇ 206), ಬಾಸ್ಮತಿ ಅಕ್ಕಿ (ಶೇ 13) ಮತ್ತು ಬಾಸ್ಮತಿ ಅಲ್ಲದ ಅಕ್ಕಿ (ಶೇ 105) ರಫ್ತುಗಳಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಾಗಿದೆ. ಇದಲ್ಲದೇ 2020ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ವ್ಯಾಪಾರದ ಸಮತೋಲನವು 9,002 ಕೋಟಿ ರೂ.ಗಳಷ್ಟಿದ್ದು, ಈ ಅವಧಿಯಲ್ಲಿ 2,133 ಕೋಟಿ ರೂ. ವ್ಯಾಪಾರ ಕೊರತೆ ಕಂಡು ಬಂದಿದೆ.
ಕೃಷಿ ರಫ್ತು ಹೆಚ್ಚಿಸಲು ಸರ್ಕಾರವು ಕೃಷಿ ರಫ್ತು ನೀತಿ 2018 ಘೋಷಿಸಿತ್ತು. ಇದು ಹಣ್ಣು, ತರಕಾರಿ, ಮಸಾಲೆ ಮುಂತಾದ ನಗದು ಬೆಳೆಗಳ ರಫ್ತು ಕೇಂದ್ರಿತ ಕೃಷಿಗೆ ಕ್ಲಸ್ಟರ್ ಆಧಾರಿತ ವಿಧಾನ ಒದಗಿಸುತ್ತದೆ. ಆ ಮೂಲಕ ದೇಶಾದ್ಯಂತ ನಿರ್ದಿಷ್ಟ ಕೃಷಿ ಉತ್ಪನ್ನಗಳಿಗೆ ಕ್ಲಸ್ಟರ್‌ಗಳನ್ನು ಗುರುತಿಸಲಾಗುತ್ತದೆ. ಈ ಕ್ಲಸ್ಟರ್‌ಗಳಲ್ಲಿ ಕೇಂದ್ರೀಕೃತ ಮಧ್ಯಸ್ಥಿಕೆ ನಡೆಸಲಾಗುತ್ತದೆ. ಕೃಷಿ / ತೋಟಗಾರಿಕೆ ಉತ್ಪನ್ನಗಳ ರಫ್ತು ಹೆಚ್ಚಿಸಲು ಕೃಷಿ ರಫ್ತು ಪ್ರಚಾರ ಸಂಸ್ಥೆ ಎಪಿಇಡಿಎ ಆಶ್ರಯದಲ್ಲಿ ಎಂಟು ರಫ್ತು ಉತ್ತೇಜನ ವೇದಿಕೆ (ಇಪಿಎಫ್) ಸ್ಥಾಪಿಸಲಾಗಿದೆ. ಬಾಳೆಹಣ್ಣು, ದ್ರಾಕ್ಷಿ, ಮಾವು, ದಾಳಿಂಬೆ, ಈರುಳ್ಳಿ, ಡೈರಿ, ಅಕ್ಕಿ ಬಾಸ್ಮತಿ ಮತ್ತು ಬಾಸ್ಮತಿ ರಹಿತ ಅಕ್ಕಿಗಳಿವೆ.