ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೇಂದ್ರಾಡಳಿತ ಪ್ರದೇಶದಲ್ಲಿನ ಆರ್ಥಿಕ ಚಟುವಟಿಕೆ ವೃದ್ಧಿಸುವ ಉದ್ದೇಶದಿಂದ 1,350 ಕೋಟಿ ರೂ. ಮೌಲ್ಯದ ಪ್ಯಾಕೇಜ್ ಘೋಷಿಸಿದರು.
ಪ್ಯಾಕೇಜ್ ಸಾಮಾನ್ಯ ಜನರಿಗೆ ಒಂದು ವರ್ಷ ವಿದ್ಯುತ್ ಮತ್ತು ನೀರಿನ ಬಿಲ್‌ಗಳ ಮೇಲೆ ಶೇ.50ರಷ್ಟು ರಿಯಾಯಿತಿಯಂತಹ ಪರಿಹಾರ ನೀಡಲಾಗಿದೆ. ಕಣಿವೆ ರಾಜ್ಯದಲ್ಲಿ ಪ್ರವಾಸೋದ್ಯಮ, ಉದ್ಯಮ ಮತ್ತು ಇತರೆ ಕ್ಷೇತ್ರಗಳಿಗೆ ಚೇತರಿಕೆ ನೀಡಲು ಹಾಗೂ ಉದ್ಯಮಿಗಳು, ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.
ಎಲ್ಲಾ ವಾಣಿಜ್ಯ ಸಾಲಗಾರರಿಗೆ ಬಡ್ಡಿ ಸಬ್‌ವೆನ್ಷನ್ ಯೋಜನೆಯಿಂದ ಕರಕುಶಲ ಉದ್ಯಮಕ್ಕೆ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಲಭ್ಯವಿರುವ ಮೊತ್ತ ದ್ವಿಗುಣಗೊಳಿಸಲಾಗುವುದು. ಪ್ರವಾಸೋದ್ಯಮ ವೃದ್ಧಿಗೆ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸಲಾಗುವುದು ಎಂದರು.
ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿದ ಜೆ&ಕೆ ಅಪ್ನಿ ಪಕ್ಷದ ಮುಖ್ಯಸ್ಥ ಅಲ್ತಾಫ್ ಬುಖಾರಿ, ಆರ್ಥಿಕ ಪ್ಯಾಕೇಜ್ ತ್ವರಿತವಾಗಿ ತರುವ ಮೂಲಕ ಸಿನ್ಹಾ ಅವರು ತಾವು ಮಾತಿನಂತೆ ನಡೆಯುವ ವ್ಯಕ್ತಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೇಂದ್ರಾಡಳಿ ಪ್ರದೇಶವು 40,000 ಕೋಟಿ ರೂ. ಆರ್ಥಿಕ ನಷ್ಟ ಅನುಭವಿಸಿದೆ. ಪ್ರಸ್ತುತ ಪ್ಯಾಕೇಜ್ ಸಾಗರದಷ್ಟು ನೀರಿನ ಹನಿ ನೀರಿನಷ್ಟಿದೆ. ಕಣಿವೆ ಪ್ರದೇಶವನ್ನು ನಿಜವಾಗಿಯೂ ಪುನರುಜ್ಜೀವನಗೊಳಿಸಲು 'ದೊಡ್ಡ ಹೃದಯ'ದ ಅಗತ್ಯವಿದೆ ಎಂದರು.