ನವದೆಹಲಿ: ಚೀನಾ ಮೂಲದ ಕಿರು ವಿಡಿಯೋ ಆ್ಯಪ್ ಟಿಕಿಟಾಕ್ಗೆ ಪರ್ಯಾಯವಾದ ಭಾರತದ ದೇಸಿ ಆ್ಯಪ್ ಚಿಂಗಾರಿಗೆ 10 ಕೋಟಿ ರೂ. ಸೀಡ್ ಫಂಡಿಂಗ್ ಸಂಗ್ರಹಿಸಿದೆ.
ಏಂಜಲ್‌ಲಿಸ್ಟ್ ಇಂಡಿಯಾ, ಉತ್ಸವ್ ಸೊಮಾನಿಸ್ ಐಸೀಡ್, ವಿಲೇಜ್ ಗ್ಲೋಬಲ್, ಲಾಗ್ ಎಕ್ಸ್ ವೆಂಚರ್ಸ್ ಮತ್ತು ಜಸ್ಮಿಂದರ್ ಸಿಂಗ್ ಗುಲಾಟಿ ಆಫ್ ನೌಪ್ಲೋಟ್ಸ್ ಸೀಡ್ ಫಂಡಿಂಗ್ ಮೂಲಕ 1.3 ಮಿಲಿಯನ್ ಡಾಲರ್ (ಸುಮಾರು 10 ಕೋಟಿ ರೂ.) ಹೂಡಿಕೆ ಮಾಡಿವೆ.
ಹೂಡಿಕೆದಾರರು ನಮ್ಮ ಭವಿಷ್ಯದ ದೃಷ್ಟಿಯಲ್ಲಿ ಅಪಾರ ಸಾಮರ್ಥ್ಯ ಕಂಡಿದ್ದಾರೆ. ಚಿಂಗಾರಿಯ ಮುಂದಿನ ಪ್ರಯಾಣಕ್ಕೆ ನಾವು ಅವರನ್ನು ಸೇರಿಸಿಕೊಂಡಿದ್ದೇವೆ ಎಂದು ಚಿಂಗಾರಿ ಆ್ಯಪ್‌ನ ಸಹಸಂಸ್ಥಾಪಕ ಮತ್ತು ಸಿಇಒ ಸುಮಿತ್ ಘೋಷ್ ಹೇಳಿದ್ದಾರೆ.
ಚಿಂಗಾರಿ 25 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಪ್ರತಿ ದಿನ 3 ಮಿಲಿಯನ್ ಸಕ್ರಿಯ ಬಳಕೆದಾರರಿದ್ದಾರೆ. ಮೈಕ್ರೋ ಸಾಫ್ಟ್ ದೇಶೀಯ ಪ್ರಾದೇಶಿಕ ಭಾಷೆಗಳ ಸಾಮಾಜಿಕ ಜಾಲತಾಣವಾದ ಶೇರ್ ಚಾಟ್ನಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಈ ಫಂಡಿಂಗ್ ಮೊತ್ತವನ್ನು ಹೆಚ್ಚುವರಿಯಾಗಿ ಹೊಸ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಚಿಂಗಾರಿ ಆ್ಯಪ್ ಇಂಗ್ಲಿಷ್ ಮತ್ತು ಹಿಂದಿಯಲ್ಲದೇ ಬಂಗಾಳಿ, ಗುಜರಾತಿ, ಮರಾಠಿ, ಕನ್ನಡ, ಪಂಜಾಬಿ, ಮಲಯಾಳಂ, ತಮಿಳು ಮತ್ತು ತೆಲುಗಿನ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಬಳಸಬಹುದಾಗಿದೆ. ಬಳಕೆದಾರರು ವಿಡಿಯೋ ಡೌನ್‌ಲೋಡ್ ಮಾಡಬಹುದು ಮತ್ತು ಅಪ್‌ಲೋಡ್ ಮಾಡಬಹುದು, ಸ್ನೇಹಿತರೊಂದಿಗೆ ಚಾಟ್ ಮಾಡಬಹುದು, ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು ಮತ್ತು ಫೀಡ್ ಮೂಲಕ ಬ್ರೌಸ್ ಮಾಡಬಹುದು.