ಮುಂಬೈ: ದೇಶದ ಅತೀ ದೊಡ್ಡ ಸಾಫ್ಟ್ವೇರ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 2019-20ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದ್ದು, ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ.
ಪ್ರಸಕ್ತ ವಿತ್ತೀಯ ವರ್ಷದ 3ನೇ ತ್ರೈಮಾಸಿಕದಲ್ಲಿ ಟಿಸಿಎಸ್ನ ಲಾಭಾಂಶದಲ್ಲಿ ಕಳೆದ ವರ್ಷಕ್ಕಿಂತ ಅಲ್ಪ ಪ್ರಮಾಣದ ಶೇ 0.16ರಷ್ಟು ಏರಿಕೆಯಾಗಿದೆ. 2018-19ರಲ್ಲಿ ₹ 8,105 ಕೋಟಿ ಇದ್ದ ಆದಾಯ 2019-20ರಲ್ಲಿ ₹ 8,118 ಕೋಟಿಗೆ ತಲುಪಿದೆ ಎಂದು ಟಾಟಾ ತಿಳಿಸಿದೆ.
ಪರಿಶೀಲನೆಯಲ್ಲಿರುವ ತ್ರೈಮಾಸಿಕದ ಏಕೀಕೃತ ಆದಾಯವು ವರ್ಷದ ಹಿಂದೆ ಇದೇ ಅವಧಿಯಲ್ಲಿ 37,338 ಕೋಟಿ ರೂ.ಗಳಷ್ಟಿತ್ತು. ಈ ವರ್ಷ ಅದು ಶೇ .6.7ರಷ್ಟು ಏರಿಕೆ ಕಂಡು 39,854 ಕೋಟಿ ರೂ.ಗೆ ತಲುಪಿದೆ ಎಂದು ಬಿಎಸ್ಇಗೆ ಸಲ್ಲಿಸಿದ ನಿಯಂತ್ರಕ ದಾಖಲಾತಿಯಲ್ಲಿ ತಿಳಿಸಲಾಗಿದೆ.
ಟಿಸಿಎಸ್ ನಿವ್ವಳ ಲಾಭವು ಶೇ 0.94 ರಷ್ಟು ಏರಿಕೆಯಾಗಿ 8,118 ಕೋಟಿ ರೂ.ಗೆ ತಲುಪಿದ್ದು, 2019-20ರ 2ನೇ ತ್ರೈಮಾಸಿಕದಲ್ಲಿ 8,042 ಕೋಟಿ ರೂ. ದಾಖಲಾಗಿತ್ತು.