ನವದೆಹಲಿ: ಭಾರತದ ಬ್ಯಾಂಕಿಂಗ್ ಕ್ಷೇತ್ರದ ಬಲವರ್ಧನೆಗೆ ಎಸ್ಬಿಐನ ಐದು ಸಹವರ್ತಿ ಹಾಗೂ ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ಗಳ ಮಹಾ ವಿಲೀನದ ಬಳಿಕ ಮೂರನೇ ಸುತ್ತಿನ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಶೀಘ್ರದಲ್ಲೇ ಚಾಲನೆಗೊಳ್ಳಲಿದೆ.
ಹಲವು ಆರ್ಥಿಕ ತಜ್ಞರು, ಬ್ಯಾಂಕ್ ಗ್ರಾಹಕರು ಹಾಗೂ ಕಾರ್ಮಿಕ ಸಂಘಟನೆಗಳ ವಿರೋಧದ ನಡುವೆಯೂ ಎರಡು ವಿಧದ ವಿಲೀನ ಪ್ರಕ್ರಿಯೆ ಹಂತ ಹಂತವಾಗಿ ಕಾರ್ಯಗತಗೊಂಡಿದೆ. ಮೂರನೇ ಸುತ್ತಿನಲ್ಲಿ ಇನ್ನೊಂದು ಮಹಾವಿಲೀನಕ್ಕೆ ತೆರೆಮರೆಯಲ್ಲಿ ಸಿದ್ಧತೆಗಳು ನಡೆದಿವೆ. ಈ ಸಂಬಂಧ ಸರ್ಕಾರವು ಬ್ಯಾಂಕ್ ಮುಖ್ಯಸ್ಥರ ಜೊತೆ ಸದ್ಯದಲ್ಲೇ ಚರ್ಚೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಸೇರಿದಂತೆ ಇತರೆ ಬ್ಯಾಂಕ್ಗಳ ಮುಖ್ಯಸ್ಥರನ್ನು ವಿಲೀನ ಸಂಬಂಧ ಸರ್ಕಾರವು ಆಹ್ವಾನಿಸಿ ಮಾತುಕತೆ ನಡೆಸುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.
ಪ್ರಸ್ತಕ ಹಣಕಾಸು ವರ್ಷದ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ವಿಲೀನ ಪ್ರಕ್ರಿಯೆ ಸಾಧ್ಯತೆಗಳನ್ನು ಚರ್ಚಿಸುವ ಸಭೆಗಳು ನಡೆಯಲಿವೆ. ವಿಲೀನ ಕುರಿತಾಗಿ ಬ್ಯಾಂಕ್ಗಳ ಪೂರಕ ಅಭಿಪ್ರಾಯ ನೀಡದೆ ಹೋದರೆ. ಈ ಬಗ್ಗೆ ತಜ್ಞರ ಸಮಿತಿ (ಎಎಂ) ರಚಿಸಿ ಸಲಹೆ ನೀಡುವ ಮಾಸ್ಟರ್ ಹಾಕಿಕೊಂಡಿದೆ.
2018ರ ಅಕ್ಟೋಬರ್ನಲ್ಲಿ ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ಗಳನ್ನು ವಿಲೀನ ಮಾಡುವ ಪ್ರಸ್ತಾವನೆ ರೂಪಿಸಲಾಗಿತ್ತು. 2019ರ ಏಪ್ರಿಲ್ 1ರಿಂದ ಈ ಬೃಹತ್ ಬ್ಯಾಂಕ್ ರೂಪಗೊಂಡಿದ್ದು, ಇದು ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿ ಹೊರ ಹೊಮ್ಮಿದೆ.
ವಿಲೀನ ಪ್ರಕ್ರಿಯೆ ಶೀಘ್ರವೇ ಮುಂದುವರಿಯಲಿದೆ. ವೀಲಿನ ಕುರಿತಾಗಿ ಬೇರೆ ಸಂಯೋಜನೆಗಳನ್ನು ಪರಾಮರ್ಶಿಸಲಾಗುವುದು. ವರ್ಷದ ಅಂತ್ಯದಲ್ಲಿ ಮತ್ತೊಂದು ವಿಲೀನ ಕ್ರಿಯೆ ಆರಂಭವಾಗಲಿದೆ. ಬ್ಯಾಂಕ್ ಈಗ ಸರಿಯಾದ ಹಳಿಗೆ ಮರಳಿದೆ. ಇತರೆ ಬ್ಯಾಂಕ್ಗಳ ಸ್ವಾದೀನದ ಪ್ರಸ್ತಾಪಗಳನ್ನು ಪರಿಗಣಿಸಲಿದ್ದೇವೆ ಎಂದು ಪಿಎನ್ಬಿ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಮೆಹ್ತಾ ಹೇಳಿದ್ದಾರೆ.