ಕ್ಯಾಲಿಫೋರ್ನಿಯಾ: ಈಗ ಏನಿದ್ರೂ ಮನೆಯಲ್ಲೇ ಕುಳಿತು ಸಿನಿಮಾ, ವೆಬ್ ಸಿರೀಸ್ ನೋಡುವ ಜಮಾನ. ಇಂತಹ ವೇದಿಕೆ ಕಲ್ಪಿಸಿರುವ ಅಗ್ರಗಣ್ಯ ಸಂಸ್ಥೆ ನೆಟ್ಫ್ಲಿಕ್ಸ್ ತನ್ನದೇ ಚಂದಾದಾರರಿಂದ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ.
ಮ್ಯಾಗಿಡ್(Magid) ಎನ್ನುವ ಸಂಸ್ಥೆ ನೆಟ್ಫ್ಲಿಕ್ಸ್ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಅಮೆರಿಕನ್ ಡಿಜಿಟಲ್ ಮೀಡಿಯಾ ಸಂಸ್ಥೆಗೆ ಆಗುತ್ತಿರುವ ನಷ್ಟದ ಪ್ರಮಾಣ ಬಹಿರಂಗಪಡಿಸಿದೆ.
ನೆಟ್ಫ್ಲಿಕ್ಸ್ ಸಂಸ್ಥೆಯ ಸದ್ಯ ವಿಶ್ವಾದ್ಯಂತ 13.7 ಮಿಲಿಯನ್(1.37 ಕೋಟಿ) ಚಂದಾದಾರನ್ನು ಅಧ್ಯಯನಕ್ಕೆ ಒಳಪಡಿಸಿ ಈ ವರದಿ ಸಿದ್ಧಪಡಿಸಿದೆ. ಚಂದಾದಾರರು ತಮ್ಮ ಪಾಸ್ವರ್ಡ್ ಅನ್ನು ಆತ್ಮೀಯರೊಂದಿಗೆ ಹಂಚಿಕೊಂಡ ಪರಿಣಾಮ ನೆಟ್ಫ್ಲಿಕ್ಸ್ಗೆ ಭಾರಿ ನಷ್ಟ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪಾಸ್ವರ್ಡ್ ಹಂಚಿಕೆಯಿಂದ ನೆಟ್ಫ್ಲಿಕ್ಸ್ಗೆ ವಾರ್ಷಿಕ 1.62 ಬಿಲಿಯನ್ ಡಾಲರ್(11 ಸಾವಿರ ಕೋಟಿ) ನಷ್ಟ ಉಂಟಾಗುತ್ತಿದೆ. ಈ ವಿಚಾರ ಸಂಸ್ಥೆ ಗಮನಕ್ಕೆ ಬಂದಿತ್ತು, ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದೆ.