ನವದೆಹಲಿ: ಮೈಕ್ರೋಸಾಫ್ಟ್ ಕಂಪನಿ ನಿರೀಕ್ಷೆಗೂ ಮೀರಿ ತನ್ನ ಸಂಪತ್ತು ವೃದ್ಧಿಸಿಕೊಳ್ಳುತ್ತಿದ್ದು, ಕಂಪನಿಯ ಸಿಇಒ ಸತ್ಯ ನಾಡೆಲ್ಲಾ ಅವರ 2018-19ರ ಆರ್ಥಿಕ ವರ್ಷದಲ್ಲಿ ವೇತನ ಏರಿಕೆಯಾಗಿದೆ.
52 ವರ್ಷದ ಭಾರತೀಯ ಮೂಲದ ನಾಡೆಲ್ಲಾ ಅವರ ವಾರ್ಷಿಕ ಆದಾಯದಲ್ಲಿ ಶೇ 66ರಷ್ಟು ಹೆಚ್ಚಳವಾಗಿದೆ. ಹಾಗೆಯೇ, ವೇತನದಲ್ಲಿ 2.3 ಮಿಲಿಯನ್ ಡಾಲರ್ (16.36 ಕೋಟಿ ರೂ.ಯಷ್ಟು) ಏರಿಕೆಯಾಗಿದ್ದು, ಎಲ್ಲ ವಿಧದ ಗಳಿಕೆಯಿಂದ ವರ್ಷಕ್ಕೆ 305 ಕೋಟಿ ರೂ. (42.9 ಮಿಲಿಯನ್ ಡಾಲರ್) ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಸ್ಟಾಕ್ ಅವಾರ್ಡ್ನಿಂದ 29.6 ಮಿಲಿಯನ್ ಡಾಲರ್, ಈಕ್ವಿಟಿ ರಹಿತ ಪ್ರೋತ್ಸಾಹಕ ಯೋಜನೆಯ ಪರಿಹಾರವಾಗಿ 10,7 ಮಿಲಿಯನ್ ಡಾಲರ್ ಇತರ ಮೂಲಗಳಿಂದ 1,11,000 ಡಾಲರ್ ಪಡೆಯುತ್ತಿದ್ದಾರೆ.
ಕಳೆದ ವಿತ್ತೀಯ ವರ್ಷದಲ್ಲಿ ಹಣಕಾಸಿನ ಕಾರ್ಯಕ್ಷಮತೆಯಲ್ಲಿ ಕಂಪನಿಯು ಮತ್ತೊಂದು ದಾಖಲೆ ಮಾಡಿದೆ. ಮೈಕ್ರೋಸಾಫ್ಟ್ ತನ್ನ ಷೇರುದಾರರಿಗೆ 30.9 ಬಿಲಿಯನ್ ಡಾಲರ್ ಮೌಲ್ಯದಷ್ಟು ಷೇರು ಮರು ಖರೀದಿ (ಬೈ ಬ್ಯಾಕ್) ಮತ್ತು ಲಾಭಾಂಶ (ಡಿವಿಡೆಂಡ್) ರೂಪದಲ್ಲಿ ಹಿಂದಿರುಗಿಸಿದೆ. ನಾಡೆಲ್ಲಾ ಅವರ ಕಾರ್ಯತಂತ್ರದ ನಾಯಕತ್ವದಿಂದ ಗ್ರಾಹಕರಲ್ಲಿ ವಿಶ್ವಾಸವು ಬಲವಾಗಿ ವೃದ್ಧಿಯಾಗಿದೆ. ಕಂಪನಿಯ ಎಲ್ಲ ವಿಭಾಗಗಳಲ್ಲಿ ಕೆಲಸದ ಸಂಸ್ಕೃತಿ ಬದಲಾಗಿದೆ. ಹೊಸ ತಂತ್ರಜ್ಞಾನಗಳು ಮತ್ತು ಮಾರುಕಟ್ಟೆಗಳ ವಿಸ್ತರಣೆಯಲ್ಲಿ ಯಶಸ್ವಿ ಕಾಣುತ್ತಿವೆ ಎಂದು ಕಂಪನಿಯ ಸ್ವತಂತ್ರ ನಿರ್ದೇಶಕ ಅಭಿಪ್ರಾಯಪಟ್ಟಿದ್ದಾರೆ.