ಮುಂಬೈ: ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಯೋಧರ ಕುಟುಂಬಗಳಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಶುಕ್ರವಾರದಂದು ಹೊಸ ಕೊಡುಗೆ ನೀಡಿದೆ.
'ಶೌರ್ಯ ಕೆಜಿಸಿ ಕಾರ್ಡ್' ಸೇವೆಗೆ ಚಾಲನೆ ನೀಡಿರುವ ಬ್ಯಾಂಕ್. ಈ ಯೋಜನೆಯಡಿ ಯೋಧರ ಕುಟುಂಬಸ್ಥರು ಕೃಷಿ ಉತ್ಪಾದನೆ, ಸುಗ್ಗಿಯ ನಂತರದ ನಿರ್ವಹಣೆ ಮತ್ತು ಬೇಸಾಯ ಬಳಕೆಯ ಅಗತ್ಯತೆಗಳಿಗೆ ಹಣಕಾಸಿನ ನೆರವು ನೀಡಲು ಉದ್ದೇಶಿಸಿದೆ.
ಕೃಷಿ ಯಂತ್ರೋಪಕರಣಗಳು, ನೀರಾವರಿ ಉಪಕರಣಗಳನ್ನು ಖರೀದಿಸಲು ಅಥವಾ ಶೇಖರಣೆ ಮಾಡಿಕೊಳ್ಳಲು ಈ ಹಣ ಬಳಸಿಕೊಳ್ಳಬಹುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದು ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಮಾರ್ಗಸೂಚಿಗಳನ್ನು ಆಧರಿಸಿದೆ. ಸರಳ ಹಾಗೂ ಸುಲಭವಾದ ದಾಖಲಾತಿಗಳ ಮೂಲಕ ಕಾರ್ಡ್‌ಗೆ ಕೃಷಿಕರ ಕೆಲಸ ಮತ್ತು ಲಭ್ಯತೆ ಅವಲಂಬಿಸಿ ಸರಾಸರಿ 2ರಿಂದ 10 ಲಕ್ಷ ರೂ. ಜೀವಿತಾವಧಿ ನೆರವು ಒದಗಿಸಲಾಗುತ್ತದೆ.
ಈ ಉತ್ಪನ್ನವು ಸಶಸ್ತ್ರ ಪಡೆಗಳಿಗೆ ಮತ್ತು ಅವರ ಕುಟುಂಬಗಳಿಗೆ ಗೌರವಪೂರ್ವ ಸೇವೆಯಾಗಿದೆ. ವಾಯುಪಡೆಯ ಕುಟುಂಬದಿಂದ ಬಂದಿದ್ದು, ಸೈನಿಕರು ಮಾಡುವ ತ್ಯಾಗಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಕರ್ತವ್ಯದಲ್ಲಿರುವ ಸಿಬ್ಬಂದಿ ಕುಟುಂಬಸ್ಥರನ್ನು ನೋಡಲು ಆಗಾಗ ಮನೆಗೆ ಹಿಂದಿರುಗುತ್ತಾರೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಪುರಿ ಹೇಳಿದರು.
ನನ್ನ ವೃತ್ತಿ ಜೀವನ ಮುಗಿಯುವ ಮುನ್ನ ಸೈನಿಕರ ಕುಟುಂಬಸ್ಥರಿಗೆ ಒಂದು ಸಣ್ಣ ಕಾರ್ಯ ಮಾಡಿದ್ದೇನೆ ಎಂಬ ತೃಪ್ತಿ ಭಾವವಿದೆ. ನಾವು ರೈತರಿಗೆ ಇರುವಂತೆ ಸಶಸ್ತ್ರ ಪಡೆಗಳ ಸಹೋದರರಿಗೂ ಸಮಾನವಾದ ಉತ್ತಮ ಉತ್ಪನ್ನವನ್ನು ನೀಡುತ್ತಿದ್ದೇವೆ. ಇದು ನಮ್ಮನ್ನು ರಕ್ಷಿಸುತ್ತಿರುವ ಯೋಧರಿಗೆ ನಮ್ಮ ಸ್ವಾತಂತ್ರ್ಯ ದಿನದ ಉಡುಗೊರೆ ಎಂದರು.
ಇದು ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ 'ಹರ್ ಗಾಂವ್ ಹಮಾರಾ' ಉಪಕ್ರಮದ ಒಂದು ಭಾಗವಾಗಿದೆ. ಬ್ಯಾಂಕ್ ಈಗಾಗಲೇ ಐದು ಲಕ್ಷ ಕೃಷಿ ಸಾಲಗಳನ್ನು ವಿತರಿಸಿದೆ. 12 ಕೃಷಿ ಧನ್ ವಿಕಾಸ್ ಕೇಂದ್ರಗಳನ್ನು ಭಾರತದಾದ್ಯಂತ ಸ್ಥಾಪಿಸಿದೆ ಎಂದು ತಿಳಿಸಿದೆ.