ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಹೊಸ ಹೂಡಿಕೆಗಳಿಗೆ ಶೇ. 15ರಷ್ಟು ಕಡಿಮೆ ಕಾರ್ಪೊರೇಟ್ ತೆರಿಗೆ ದರ ಪಡೆಯುವ ಗಡುವನ್ನು ವಿಸ್ತರಿಸಲು ಸರ್ಕಾರ ಪರಿಗಣಿಸಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕುಂಟುತ್ತಾ ಸಾಗುತ್ತಿದ್ದ ದೇಶದ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು 2019ರ ಸೆಪ್ಟೆಂಬರ್ 20ರಂದು ಕಾರ್ಪೊರೇಟ್ ತೆರಿಗೆ ದರ ಕಡಿತದ ಕೊಡುಗೆಯನ್ನು ಪ್ರಕಟಿಸಿತ್ತು. ಅಸ್ತಿತ್ವದಲ್ಲಿರುವ ಕಂಪನಿಗಳಿಗೆ ಮೂಲ ಕಾರ್ಪೊರೇಟ್ ತೆರಿಗೆ ದರ ಶೇ 30ರಿಂದ 22ಕ್ಕೆ ಮತ್ತು 2019ರ ಅಕ್ಟೋಬರ್ 1ರ ನಂತರದ ಹೊಸ ಉತ್ಪಾದನಾ ಸಂಸ್ಥೆಗಳಿಗೆ ತೆರಿಗೆ ದರ ಶೇ 25ರಿಂದ 15 ಪ್ರತಿಶತಕ್ಕೆ ಇಳಿಸಲಾಯಿತು. 2023ರ ಮಾರ್ಚ್ 31ರವರೆಗೆ ಇದು ಚಾಲ್ತಿಯಲ್ಲಿರುತ್ತದೆ.
ಏನು ಮಾಡಬಹುದೆಂದು ನಾನು ಎದುರು ನೋಡುತ್ತೇನೆ. ಹೊಸ ಹೂಡಿಕೆಗಳ ಮೇಲಿನ ಶೇ. 15ರಷ್ಟು ಕಾರ್ಪೊರೇಟ್ ತೆರಿಗೆ ದರದಿಂದ ಉದ್ಯಮವು ಲಾಭ ಪಡೆಯಬೇಕೆಂದು ನಾವು ಬಯಸುತ್ತೇವೆ. 2023ರ ಮಾರ್ಚ್ 31ರ ಗಡುವನ್ನು ವಿಸ್ತರಣೆ ಮಾಡಲು ನಾನು ನಿಮ್ಮ ಅಭಿಪ್ರಾಯ ತೆಗೆದುಕೊಳ್ಳುತ್ತೇನೆ ಎಂದು ಸೀತಾರಾಮನ್ ಅವರು ಫಿಕ್ಕಿ ಸದಸ್ಯರನ್ನು ಉದ್ದೇಶಿಸಿ ಹೇಳಿದರು.
ಭಾರತೀಯ ವ್ಯವಹಾರ ಬೆಂಬಲಿಸುವ ಮತ್ತು ಆರ್ಥಿಕತೆ ಪುನಶ್ಚೇತನಗೊಳಿಸುವ ಉದ್ದೇಶದಿಂದ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಉದ್ಯಮಕ್ಕೆ ನೀಡುವುದಾಗಿ ವಾಗ್ದಾನ ನೀಡಿದರು.
ಕೋವಿಡ್-19 ತುರ್ತು ಸಾಲ ಸೌಲಭ್ಯವು ಎಲ್ಲಾ ಕಂಪನಿಗಳನ್ನು ಒಳಗೊಳ್ಳುತ್ತದೆ. ಕೇವಲ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಮಾತ್ರವಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ದ್ರವ್ಯತೆ ಸಮಸ್ಯೆಯ ಬಗ್ಗೆ ಸಾಕಷ್ಟು ಸ್ಪಷ್ಟವಾಗಿ ತಿಳಿಸಿದ್ದೇವೆ. ದ್ರವ್ಯತೆಯ ಲಭ್ಯತೆ ಸಾಕಷ್ಟು ಇದೆ. ಸಮಸ್ಯೆಗಳಿದ್ದರೆ ನಾವು ಅದನ್ನು ಪರಿಶೀಲಿಸುತ್ತೇವೆ. ಪ್ರತಿ ಸರ್ಕಾರಿ ಇಲಾಖೆಗೆ ಬಾಕಿ ಹಣವನ್ನು ತೆರವುಗೊಳಿಸುವಂತೆ ತಿಳಿಸಲಾಗಿದೆ. ಯಾವುದೇ ಇಲಾಖೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಸರ್ಕಾರವು ಆ ಬಗ್ಗೆ ಪರಿಶೀಲಿಸುತ್ತದೆ ಎಂದು ಹೇಳಿದರು.
ಜಿಎಸ್ಟಿ ದರ ಕಡಿತವು ಮಂಡಳಿ ಮುಂದೆ ಹೋಗುತ್ತದೆ. ಆದರೆ, ಜಿಎಸ್ಟಿ ಕೌನ್ಸಿಲ್ ಸಹ ಆದಾಯದ ಮೂಲಗಳನ್ನು ಹುಡುಕುತ್ತಿದೆ. ಯಾವುದೇ ವಲಯಕ್ಕೆ ದರ ಕಡಿಮೆ ಮಾಡುವ ನಿರ್ಧಾರ ಕೌನ್ಸಿಲ್ ತೆಗೆದುಕೊಳ್ಳಲಿದೆ ಎಂದು ಸೀತಾರಾಮನ್ ಹೇಳಿದರು.