ಬೀಜಿಂಗ್: ಚೀನಾದ ಗೇಮರ್ ಒಬ್ಬರು 10 ಕೋಟಿ ರೂ. ಮೌಲ್ಯದ ವಿಡಿಯೋ ಗೇಮ್ ಕ್ಯಾರೆಕ್ಟರ್ ಅನ್ನು 40,000 ರೂ.ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಕ್ಕಾಗಿ ತನ್ನ ಸ್ನೇಹಿತನ ವಿರುದ್ಧ ಮೊಕದ್ದಮೆ ಹೂಡಿದ್ದಾನೆ.
ಲು ಮೌ ಎಂಬುವವರು ತನ್ನ ‘ಜಸ್ಟೀಸ್ ಆನ್‌ಲೈನ್’ ಗೇಮ್ನ ಒಂದು ಕ್ಯಾರೆಕ್ಟರ್ ಅಭಿವೃದ್ಧಿಪಡಿಸಲು ಮತ್ತು ಕಸ್ಟಮೈಸ್ ಮಾಡಲು ಸುಮಾರು 10 ಮಿಲಿಯನ್ ಯುವಾನ್ (ಅಂದಾಜು 10 ಕೋಟಿ ರೂ.) ಖರ್ಚು ಮಾಡಿದ್ದ. ಈ ಗೇಮ್ ಆಡಲು ತನ್ನ ಸ್ನೇಹಿತ ಲಿ ಮೌಸ್ಚೆಂಗ್‌ಗೆ ನೀಡಿದ್ದ.
ಅತಿಯಾದ ಗೇಮಿಂಗ್ನಿಂದ ತಲೆ ನೋವಿಗೆ ತುತ್ತಾದ ಮೌಸ್ಚೆಂಗ್, ಪಾತ್ರವನ್ನು ಲು ಮೌಗೆ ಹಿಂದಿರುಗಿಸುವ ಪ್ರಯತ್ನದಲ್ಲಿ ಇರುವಾಗ ಆಕಸ್ಮಿಕವಾಗಿ ನೆಟ್‌ಇಸ್‌ನಲ್ಲಿ ಕಸ್ಟಮೈಸ್ ಮಾಡಿದ ಪಾತ್ರವನ್ನು ಬದಲಿ ಕ್ಲಿಕ್ ಮಾಡಿ ಕೇವಲ 3,888 ಯುವಾನ್‌ಗೆ (40,000 ರೂ.) ಮಾರಾಟ ಮಾಡಿದ್ದಾನೆ.
ಸಿಚುವಾನ್ ಪ್ರಾಂತ್ಯದ ಹೊಂಗ್ಯಾ ಕೌಂಟಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿಗಳು ಮೌ ಪರವಾಗಿ ತೀರ್ಪು ನೀಡಿದ್ದಾರೆ. ರಿಯಾಯಿತಿ ದರದಲ್ಲಿ ಪಾತ್ರವನ್ನು ಖರೀದಿಸಿದ ಆಟಗಾರನಿಗೆ 90,000 ಯುವಾನ್ (9 ಲಕ್ಷ ರೂ.) ನಷ್ಟ ಪರಿಹಾರ ನೀಡಿ, ಗೇಮಿನ ಮೂಲ ಕ್ಯಾರೆಕ್ಟರ್ ಅನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಬೇಕು ಎಂದು ಆದೇಶಿಸಿದ್ದಾರೆ.
ವಿಡಿಯೋ ಗೇಮ್‌ಗಳಲ್ಲಿ ಹೆಚ್ಚು ಸಮಯ ಕಳೆದು ಅಪಾಯಕ್ಕೆ ತುತ್ತಾಗುತ್ತಿರುವ ಯುವ ಸಮುದಾಯದ ಬಗ್ಗೆ ಸ್ಥಳೀಯ ನ್ಯಾಯಾಲಯವು ಜನರಿಗೆ ಎಚ್ಚರಿಕೆ ನೀಡಿದೆ. ದೇಶದಲ್ಲಿ ವಿಡಿಯೋ ಗೇಮ್ ಹವ್ಯಾಸದಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ತಡೆಯಲು, ವಿಡಿಯೋ ಗೇಮ್ಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಹೊಸ ಕಾನೂನನ್ನು ಜಾರಿಗೆ ತರಲು ಇಲ್ಲಿನ ಸರ್ಕಾರಕ್ಕೆ ವಾರಗಳ ಗಡುವು ನೀಡಿದೆ.18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ವಾರದ ದಿನದಂದು ದಿನಕ್ಕೆ 90 ನಿಮಿಷಗಳಿಗಿಂತ ಹೆಚ್ಚು ಆಟವಾಡಲು ಮತ್ತು ವಾರಾಂತ್ಯ ಮತ್ತು ರಜಾದಿನಗಳಲ್ಲಿ ದಿನಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚು ಗೇಮಿಂಗ್ನಲ್ಲಿ ಇರುವುದನ್ನು ನಿಷೇಧಿಸಲಾಗಿದೆ.