ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಅವರು ಜೂನ್ 22ರಿಂದ ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಯ (ಎನ್‌ಐಪಿಎಫ್‌ಪಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಆರ್ಥಿಕ ಚಿಂತನಾ ಕೇಂದ್ರ ತಿಳಿಸಿದೆ.
ಉರ್ಜಿತ್ ಪಟೇಲ್ ಅವರು 2014ರ ನವೆಂಬರ್ 1ರಂದು ಅಧಿಕಾರ ವಹಿಸಿಕೊಂಡಿದ್ದ ವಿಜಯ್ ಕೆಲ್ಕರ್ ಅವರಿಂದ ತೆರವಾಗುತ್ತಿರುವ ಸ್ಥಾನದಲ್ಲಿ ಕುಳಿತುಕೊಳ್ಳಲಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯು ಡಾ. ಉರ್ಜಿತ್ ಪಟೇಲ್ ಅವರನ್ನು 2020ರ ಜೂನ್ 22ರಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ”ಎಕನಾಮಿಕ್ ಥಿಂಕ್ ಟ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಪಟೇಲ್ ಅವರು 2018ರ ಡಿಸೆಂಬರ್ 10ರಂದು ಕೇಂದ್ರ ಬ್ಯಾಂಕ್ನ ಮಂಡಳಿಯ ನಿರ್ಣಾಯಕ ಸಭೆಯ ನಾಲ್ಕು ದಿನಗಳಿಗೂ ಮುನ್ನ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದರು. ಕೇಂದ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯದಿಂದ ಹೊರ ಬಂದರು ಎಂದು ಈ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಪಟೇಲ್ ಅವರ ಮೂರು ವರ್ಷಗಳ ಗವರ್ನರ್ ಅವಧಿ 2019ರ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಬೇಕಿತ್ತು.
ನಿರ್ಗಮಿತ ಅಧ್ಯಕ್ಷ ಡಾ. ವಿಜಯ್ ಲಕ್ಷ್ಮಣ್ ಕೆಲ್ಕರ್ ಅವರ ಅಧಿಕಾರಾವಧಿಯಲ್ಲಿ ನೀಡಿದ ಮಹತ್ವದ ಕೊಡುಗೆಗಳಿಗೆ ಎನ್‌ಐಪಿಎಫ್‌ಪಿ ಕೃತಜ್ಞತೆ ಸಲ್ಲಿಸಿದೆ. ಸಂಸ್ಥೆಯ ಪ್ರಸ್ತುತ ಮಟ್ಟದ ಬೆಳವಣಿಗೆ ಆಗಲು ಕೆಲ್ಕರ್ ಅವರು ಅಪಾರವಾಗಿ ಶ್ರಮಿಸಿದ್ದಾರೆ ಎಂದು ಹೇಳಿದೆ.