ನವದೆಹಲಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳಿಗೆ ಅನುಮೋದನೆ ನೀಡಿದ ಬಳಿಕ ಡಿಜಿಟಲ್ ಮಾಧ್ಯಮ ದೈತ್ಯ ಸಂಸ್ಥೆಗಳಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಗೂಗಲ್, ಪಾಕಿಸ್ತಾನದಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿವೆ.
ಏಷ್ಯಾ ಇಂಟರ್ನೆಟ್ ಒಕ್ಕೂಟ (ಎಐಸಿ) ಸಂಘಟನೆಯ ಮೂಲಕ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕಠಿಣ ಪತ್ರ ಬರೆದಿವೆ. ಇಮ್ರಾನ್ ಖಾನ್ ಅವರು, 'ಎಐಸಿ ನಿಯಮಗಳನ್ನು ಅಸ್ಪಷ್ಟ ಮತ್ತು ಅನಿಯಂತ್ರಿತ ಸ್ವರೂಪ' ಎಂದು ಕರೆದಿದ್ದರು.
ಪ್ರಸ್ತುತ ಜಾರಿಗೆ ತಂದಿರುವ ನಿಯಮಗಳು ಜಟಿಲವಾದವು. ಎಐಸಿ ಸದಸ್ಯರಿಗೆ ತಮ್ಮ ಸೇವೆಗಳನ್ನು ಪಾಕಿಸ್ತಾನಿ ಬಳಕೆದಾರರಿಗೆ ಮತ್ತು ವ್ಯವಹಾರಗಳಿಗೆ ಲಭ್ಯವಾಗುವಂತೆ ಮಾಡುವುದು ಬಹಳ ಕಷ್ಟಕರವಾಗಿದೆ ಎಂದು ಕಂಪನಿಗಳು ಎಚ್ಚರಿಸಿವೆ.
ಏಷ್ಯಾ ಇಂಟರ್ನೆಟ್ ಒಕ್ಕೂಟವು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿನ ಇಂಟರ್ನೆಟ್ ನೀತಿ ಸಮಸ್ಯೆಗಳ ತಿಳಿವಳಿಕೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ಉದ್ಯಮ ಸಂಘವಾಗಿದೆ.
ನಾವು ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸುವ ವಿರೋಧಿಗಳಲ್ಲ. ಆನ್‌ಲೈನ್ ನಿಯಮಗಳನ್ನು ನಿಯಂತ್ರಿಸಲು ಪಾಕಿಸ್ತಾನವು ಈಗಾಗಲೇ ಶಾಸಕಾಂಗದ ಚೌಕಟ್ಟು ಹೊಂದಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ವೈಯಕ್ತಿಕ ಅಭಿವ್ಯಕ್ತಿ ಮತ್ತು ಗೌಪ್ಯತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾದ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ಈ ನಿಯಮಗಳು ವಿಫಲವಾಗಿವೆ ಎಂದು ಎಐಸಿ ಪತ್ರದಲ್ಲಿ ಹೇಳಿವೆ.
ಪಾಕ್ ಹೊಸ ನಿಯಮಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಕಂಪೆನಿಗಳು ಇಸ್ಲಾಮಾಬಾದ್‌ನಲ್ಲಿ (ಪಾಕಿಸ್ತಾನದ ರಾಜಧಾನಿ) ಕಚೇರಿಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸಿದೆ. ಇದಲ್ಲದೆ, ಮಾಹಿತಿ ಸಂಗ್ರಹಿಸಲು ಮತ್ತು ಅಧಿಕಾರಿಗಳು ಗುರುತಿಸಿದ ವಿಷಯವನ್ನು ತೆಗೆದುಹಾಕುವಂತಹ ಡೇಟಾ ಸರ್ವರ್ ನಿರ್ಮಿಸಬೇಕು ಎಂದು ಸೂಚನೆ ನೀಡಿದೆ.