ಮುಂಬೈ: ದೇಶದ ಮತ್ತು ಜಾಗತಿಕ ವಿಷಯಗಳ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರಾ, ಬದುಕಿನ ಸೋಲು-ಗೆಲುವಿನ ಅನುಭವಗಳನ್ನು ವರ್ಜಿನ್ ಗ್ರೂಪ್ ಸಂಸ್ಥಾಪಕ ರಿಚರ್ಡ್ ಬ್ರಾಂಡ್ಸನ್ ಅವರೊಂದಿಗೆ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
'ದಶಕದ ಹಿಂದೆ ಬೈಕ್ ಮಾರುಕಟ್ಟೆ ವಿಭಾಗಕ್ಕೆ ಪ್ರವೇಶಿಸಿದ್ದ ಮಹೀಂದ್ರಾ ಗ್ರೂಪ್ ದೊಡ್ಡ ತಪ್ಪು ಮಾಡಿತ್ತು. ಹಣ ಮತ್ತು ಮಾನವ ಸಂಪನ್ಮೂಲ ಬಂಡವಾಳದಂತೆಯೇ ವೈಫಲ್ಯವೂ ಕೂಡ ಒಂದು 'ಬಂಡವಾಳ'. ಪ್ರಯಾಣಿಕರ ಬೈಕ್ ವಿಭಾಗದ 'ಉತ್ಪನ್ನಗಳ ವೈಫಲ್ಯ'ದಿಂದ ನಾವು ಸಾಕಷ್ಟು ತಿಳಿದುಕೊಂಡು ಈಗ ಯಶಸ್ವಿಯಾಗಿದ್ದೇವೆ' ಎಂದು ಹೇಳಿದ್ದಾರೆ.
ಜುಲೈ 2008ರಲ್ಲಿ ಕೈನೆಟಿಕ್ ಮೋಟಾರ್ಸ್ ಖರೀದಿಸಿದ ನಂತರ ಮಹೀಂದ್ರಾ ಗ್ರೂಪ್ ಕಂಪನಿ ದ್ವಿಚಕ್ರ ವಾಹನಗಳ ಮಾರುಕಟ್ಟೆ ವಿಭಾಗಕ್ಕೆ ಪ್ರವೇಶಿಸಿತ್ತು. ಆ ವೇಳೆ ಮಾರುಕಟ್ಟೆಯಲ್ಲಿ ಹೀರೋ ಮೋಟರ್‌ಕಾರ್ಪ್ ಮತ್ತು ಜಪಾನಿನ ಹೋಂಡಾ ಕಂಪನಿಗಳು ಸಾಕಷ್ಟು ಪ್ರಾಬಲ್ಯ ಹೊಂದಿದ್ದು, ಮಾರುಕಟ್ಟೆಯಲ್ಲಿ ವಾರ್ಷಿಕ 21 ದಶಲಕ್ಷಕ್ಕೂ ಹೆಚ್ಚಿನ ಯೂನಿಟ್ಗಳ ಮಾರಾಟದ ಮುಖೇನ ಮೂರನೇ ಎರಡರಷ್ಟು ಭಾಗವನ್ನು ನಿಯಂತ್ರಿಸುತ್ತಿದ್ದವು.
'ಪರಿಸರ ವ್ಯವಸ್ಥೆ, ವಿತರಣೆಯ ಜಾಲ, ಆರ್ & ಡಿ (ಸಂಶೋಧಾನ ಮತ್ತು ಅಭಿವೃದ್ಧ) ಮತ್ತು ಬ್ರಾಂಡ್ ಸ್ಥಾನೀಕರಣದ ಬಗ್ಗೆ ಬಲವಾದ ತಿಳುವಳಿಕೆ ಪಡೆದು 'ಗೆಲ್ಲುವ' ವಿಶ್ವಾಸದೊಂದಿಗೆ ಮತ್ತೊಮ್ಮೆ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪ್ರವೇಶಿಸಿದ್ದೇವೆ' ಎಂದರು.
ನಮ್ಮ ಕನಸು ಏನು ಎಂಬುದನ್ನು ನಾವು ಚೆನ್ನಾಗಿ ತಿಳಿದಿದ್ದೇವೆ. ನಮಗೆ ಸರಿಯಾದ ವಿಷಯಗಳಿವೆ. ಆದರೆ, ಗೆಲ್ಲುವುದು ಹೇಗೆ? ನಾವು ಎಲ್ಲಿ ತಪ್ಪಿದೆವು ಎನ್ನುವುದನ್ನು ಅರಿಯದೆ ನಾವು ಎಂದಿಗೂ ಪ್ರಯಾಣಿಕರ ಬೈಕ್ ಕಡೆಗೆ ಹೋಗಬಾರದು. 'ವ್ಯವಹಾರ ಎನ್ನುವುದು ಒಂದು ಸಾಹಸವಾಗಿ ನೋಡಿದ್ದೇವೆ ಎಂದರು.
ಒಂದು ವರ್ಷದ ಹಿಂದೆ ಪ್ರೀಮಿಯಂ ಜಾವಾ ಬ್ರಾಂಡ್ ಬೈಕ್‌ಗಳನ್ನು ಮತ್ತೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದೆವು. ಗ್ರಾಹಕರು ಬೈಕ್ ಪಡೆಯಲು ಐದು ತಿಂಗಳವರೆಗೂ ಕಾಯಲು ಸಿದ್ಧರಾಗಿದ್ದಾರೆ. ಇದು ನಾವು ಯಶಸ್ವಿಯಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಈ ಹಿಂದೆ ಸ್ವಾಧೀನಪಡಿಸಿಕೊಂಡ ಬಿಎಸ್‌ಎ ಬೈಕ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಆಟೋ ವಲಯದಲ್ಲಿನ ಮಂದಗತಿ ಬೆಳವಣಿಗೆಯ ಬಗ್ಗೆ ಮಾತನಾಡಿದ ಆನಂದ್ ಮಹೀಂದ್ರಾ, ವಾಹನೋದ್ಯಮ ವಲಯದಲ್ಲಿ 'ಅತ್ಯಂತ ಆಶಾವಾದಿ' ಉದ್ಯಮಿಗಳಿದ್ದಾರೆ. ಏಪ್ರಿಲ್‌ನಿಂದ ಬಿಸಿಲಿನ ದಿನಗಳು ಹಿಂತಿರುಗಲಿವೆ. ಬರಲಿರುವ ಕ್ಯಾಲೆಂಡರ್ ವರ್ಷದಲ್ಲಿ ಉತ್ತಮ ಬೆಳವಣಿಗೆ ಕಂಡುಬರಲಿದೆ. ಏಪ್ರಿಲ್‌ನಿಂದ ವಾಹನಗಳ ಹೊಗೆ ಹೊರಸೂಸುವಿಕೆಯ ನೂತನ ಮಾನದಂಡ ಜಾರಿಗೆ ಬರಲಿದೆ. ಇದು ದೊಡ್ಡ ಪ್ರಮಾಣದ ಬೇಡಿಕೆ ಸೃಷ್ಟಿಸಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದ್ದರು.
ವೈಫಲ್ಯಗಳನ್ನು ನುಂಗುವುದು ತುಂಬ ಕಷ್ಟ. ನೀವು ಉದ್ಯಮದಲ್ಲಿ ಇನ್ನಷ್ಟು ಒಳಗೆ ಹೋಗಿ ಮತ್ತೆ ಹೂಡಿಕೆ ಮಾಡಲು ಆರಂಭಿಸಬೇಕು. 'ಡರ್ ಕೆ ಆಗೆ ಜೀತ್ ಹೈ' (ಭಯವನ್ನು ಮೀರಿ ನಡೆದರೆ ಗೆಲುವಿದೆ). ಅದು ಕೇವಲ ಘೋಷಣೆಯಲ್ಲ. ನಾವು ನಿಜವಾಗಿಯೂ ಆಂತರಿಕವಾಗಿ ಒಳಗೆ ಹೋದರೆ. ನಾವು ಒಳಗೆ ಹೋಗುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಂಡರೆ ಒಂದು ಅಗಾಧ ಶಕ್ತಿಯನ್ನು ಪಡೆದುಕೊಳ್ಳುತ್ತೇವೆ ಎಂದು ವಿಶ್ವಾಸದ ನುಡಿಗಳನ್ನು ಆಡಿದರು.
ಒಬ್ಬ ಉದ್ಯಮಿ ಅಪಾಯಗಳನ್ನು ತೆಗೆದುಕೊಳ್ಳಬೇಕಾಗಿದೆ. ಅದನ್ನು 'ವಿನೋದ' ಎಂದು ಕರೆದ ಮಹೀಂದ್ರಾ, ನಾವು ತಳಮಟ್ಟವನ್ನು ಮೀರಿ ಬಹು-ಪಾಲುದಾರರ ಬಂಡವಾಳಶಾಹಿಗಳತ್ತ ನೋಡುವ ಸಮಯ ಬಂದಿದೆ ಎಂದರು.