ಬೀಜಿಂಗ್ : ಜಿನ್‌ಪಿಂಗ್ ಸರ್ಕಾರದ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದ ಅಲಿಬಾಬಾ ಮತ್ತು ಆಂಟ್ ಗ್ರೂಪ್ ಸ್ಥಾಪಕ ಜಾಕ್ ಮಾಗೆ ಚೀನಾದ ಆಡಳಿತರೂಢ ಪಕ್ಷದಿಂದ ಮತ್ತೊಂದು ಸಂಕಷ್ಟ ಎದುರಾಗಿದೆ.
ಮಾಧ್ಯಮ ಕಂಪನಿಗಳಲ್ಲಿ ಸಾಕಷ್ಟು ಪಾಲು ಹೊಂದಿರುವ ಜಾಕ್ ಅವರು, ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಚೀನಾದ ಕಮ್ಯುನಿಸ್ಟ್ ಸರ್ಕಾರ ಭಾವಿಸಿದೆ. ಮಾಧ್ಯಮ ಸ್ವತ್ತುಗಳನ್ನು ವಿಲೇವಾರಿ ಮಾಡುವಂತೆ ಒತ್ತಡ ಹೇರಲು ಸರ್ಕಾರ ಆರಂಭಿಸಿದೆ. ಈ ಹಿನ್ನೆಲೆ ಆ ಮಾಧ್ಯಮ ಕಂಪನಿಗಳಲ್ಲಿನ ಷೇರುಗಳನ್ನು ಹಿಂಪಡೆಯಲು ಆದೇಶಿಸಿದೆ.
ಹಾಂಗ್ ಕಾಂಗ್ ಮೂಲದ 118 ವರ್ಷಗಳ ಹಳೆಯ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ಸಂಪೂರ್ಣ ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ಜಾಕ್ ಅವರು ಮಾಧ್ಯಮ ವ್ಯವಹಾರ ಪ್ರವೇಶಿಸಿದರು.
ಈಗಾಗಲೇ ಐಪಿಒ ನಿರ್ಬಂಧಿಸಿರುವ ಜಿನ್‌ಪಿಂಗ್ ಸರ್ಕಾರ, ಇತ್ತೀಚೆಗೆ ಜಾಕ್ ಮಾಗೆ ಅಲಿಬಾಬಾದಲ್ಲಿ ತನ್ನ ಪಾಲು ಹಿಂಪಡೆಯುವಂತೆ ಆದೇಶಿಸಿತ್ತು. ಅಮೆರಿಕದ ನಿಯತಕಾಲಿಕ ವಾಲ್ ಸ್ಟ್ರೀಟ್ ಜರ್ನಲ್ ಈ ವಿಷಯ ಬಹಿರಂಗಪಡಿಸಿದೆ.
ಇದನ್ನೂ ಓದಿ: ಕೋವಿಡ್ 2ನೇ ಅಲೆಗೆ ಬೆದರಿದ ಗೂಳಿ: ಪೇಟೆಯಲ್ಲಿ ಈಗ ಕರಡಿಯ ಕುಣಿತ
ಅಲಿಬಾಬಾ ಮತ್ತು ಆಂಟ್ ಗ್ರೂಪ್, ಚೀನಾದ ಪ್ರಮುಖ ಕಂಪನಿಗಳಾದ ಯಿಕೈ ಮೀಡಿಯಾ ಗ್ರೂಪ್, ಸೋಷಿಯಲ್ ಮೀಡಿಯಾ ವೀಬೊ, ವಿಡಿಯೋ ಪ್ಲಾಟ್‌ಫಾರ್ಮ್ ಬಿಲಿಬಿಲಿ, 36 ಕೆಆರ್ ಮತ್ತು ಕೈಗ್ಜಿನ್ ಮೀಡಿಯಾದಲ್ಲಿ ಪಾಲು ಹೊಂದಿದೆ. ಜಾಕ್, ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ಮತ್ತು ಕ್ಸಿನ್ ಜಿಯಾಂಗ್ ಹಾಗೂ ಸಿಚುವಾನ್ ಪ್ರಾಂತ್ಯಗಳಲ್ಲಿನ ಸ್ಥಳೀಯ ಪತ್ರಿಕೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಜಾಕ್ ಮಾ ಅವರ ಮಾಧ್ಯಮ ವಿಸ್ತರಣೆಯ ಬಗ್ಗೆ ಚೀನಾ ಸರ್ಕಾರ ಚಿಂತಿಸುತ್ತಿದೆ. ಅವರನ್ನು ತಡೆಯಲು ಅದು ಬಯಸಿದೆ ಎಂದು ವಾಲ್ ಸ್ಟ್ರೀಟ್ ವರದಿ ಮಾಡಿದೆ. ಕ್ಷೇತ್ರದಿಂದ ಕ್ರಮೇಣ ಹಿಂದೆ ಸರಿಯುವ ಯೋಜನೆ ಕೈಗೊಳ್ಳುವಂತೆ ಅಲಿಬಾಬಾ ಅವರ ಆಂಟ್ ಸಮೂಹಕ್ಕೆ ಸೂಚಿಸಿದೆ.