ಮುಂಬೈ: ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚವಲ್ ಫಂಡ್ (ಎಫ್ಟಿಎಂಎಫ್) ತನ್ನ ಆರು ಸ್ಥಿರ ಆದಾಯದ ಸಾಲ ಯೋಜನೆಗಳನ್ನು ನಿಲ್ಲಿಸಿದ್ದು, ಹೂಡಿಕೆದಾರರನ್ನು ರಕ್ಷಿಸಲು ಮಾರುಕಟ್ಟೆ ನಿಯಂತ್ರಕ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹಾಗೂ ಹಣಕಾಸು ಸಚಿವಾಲಯ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ದಲ್ಲಾಳಿಗಳ ಒಕ್ಕೂಟ ಮನವಿ ಮಾಡಿದೆ.
ಫ್ರಾಂಕ್ಲಿನ್ ಇಂಡಿಯಾ ಆಲ್ಟ್ರಾ ಶಾರ್ಟ್ ಬಾಂಡ್ ಫಂಡ್, ಫ್ರಾಂಕ್ಲಿನ್ ಇಂಡಿಯಾ ಶಾರ್ಟ್ ಟರ್ಮ್ ಇನ್‌ಕಮ್ ಪ್ಲ್ಯಾನ್, ಫ್ರಾಂಕ್ಲಿನ್ ಇಂಡಿಯಾ ಕ್ರೆಡಿಟ್ ರಿಸ್ಕ್ ಫಂಡ್, ಫ್ರಾಂಕ್ಲಿನ್ ಇಂಡಿಯಾ ಸೇವಿಂಗ್ಸ್ ಫಂಡ್, ಫ್ರಾಂಕ್ಲಿನ್ ಇಂಡಿಯಾ ಡೈನಮಿಕ್ ಅಕ್ರುವಲ್ ಫಂಡ್ ಹಾಗೂ ಫ್ರಾಂಕ್ಲಿನ್ ಇಂಡಿಯಾ ಲೋ ಡ್ಯುರೇಷನ್ ಫಂಡ್ ಯೋಜನೆಗಳನ್ನು ನಿಲ್ಲಿಸಿದೆ. ಈ ಎಲ್ಲ ಯೋಜನೆಗಳ ಒಟ್ಟು ಆಸ್ತಿ ಮೌಲ್ಯ ಸುಮಾರು 26,000 ಕೋಟಿ ರೂ.ಯಷ್ಟಿದೆ.
ಎಫ್‌ಟಿಎಂಎಫ್‌ನ ಈ ಕ್ರಮವು ಆಸ್ತಿ ನಿರ್ವಹಣಾ ಕಂಪನಿಗಳು ಸೇರಿದಂತೆ ಇತರ ಸಾಲ ಯೋಜನೆಗಳಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆದಾರರಲ್ಲಿ ಭೀತಿಯನ್ನು ಸೃಷ್ಟಿಸಿದೆ ಎಂದು ಅಸೋಸಿಯೇಷನ್ ಆಫ್ ನ್ಯಾಷನಲ್ ಎಕ್ಸ್‌ಚೇಂಜ್ ಮೆಂಬರ್ಸ್ ಆಫ್ ಇಂಡಿಯಾ (ಎಎನ್‌ಎಂಐ) ಹೇಳಿದೆ.
ಲಕ್ಷಾಂತರ ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣದ ಉಳಿತಾಯ ರಕ್ಷಿಸಲು ಕೂಡಲೇ ಮಧ್ಯ ಪ್ರವೇಶಿಸುವಂತೆ ಕೋರಿ ಎಎನ್‌ಎಂಐ ಬಂಡವಾಳ ಮಾರ್ಕೆಟ್‌ಗಳ ನಿಯಂತ್ರಕ ಸೆಬಿ ಮತ್ತು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದೆ.
ಎಫ್‌ಟಿಎಂಎಫ್‌ನ ಯೋಜನೆಗಳಲ್ಲಿ ನಿಖರವಾದ ಸಮಸ್ಯೆಗಳನ್ನು ತಿಳಿಯಲು ಮ್ಯೂಚುವಲ್ ಫಂಡ್ ಕಾರ್ಯನಿರ್ವಾಹಕರ ತಜ್ಞರ ಸಮಿತಿಯೊಂದನ್ನು ರಚಿಸಲು ಬ್ರೋಕರೆಜ್ ಒಕ್ಕೂಟ ಮುಂದಾಯಿತು.
ಬ್ಯಾಂಕ್ ಠೇವಣಿಗಳಿಗೆ ಹೋಲಿಸಿದರೆ ಹೆಚ್ಚಿನ ಆದಾಯ ಬರುವ ಕಾರಣದಿಂದ ಹಲವಾರು ಚಿಲ್ಲರೆ ವ್ಯಾಪಾರಸ್ಥರು ಸೇರಿದಂತೆ ಕಾರ್ಪೊರೇಟ್ ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳಲ್ಲಿ ಸರಾಸರಿ 3 ವರ್ಷಗಳವರೆಗೆ ಹೂಡಿಕೆ ಮಾಡುತ್ತಾರೆ. ಆದರೆ, ಇದೀಗ ಈ ಯೋಜನೆಗಳನ್ನು ನಿಲ್ಲಿಸಿರುವ ಕಾರಣ ಹೂಡಿಕೆ ಲಭ್ಯವಿಲ್ಲದಂತಾಗಿದೆ.