ನವದೆಹಲಿ: ತಂತ್ರಜ್ಞಾನ ದೈತ್ಯ ಕಂಪನಿ ಆ್ಯಪಲ್ ಭಾರತದಲ್ಲಿ ಐಫೋನ್ X R ತಯಾರಿಕೆಗೆ ಚಾಲನೆ ನೀಡಿದೆ.
ದೇಶದಲ್ಲಿ ಮೊಬೈಲ್ ತಯಾರಿಕೆ ಹೆಚ್ಚಿಸುವ ಸರ್ಕಾರದ ಪ್ರಯತ್ನ ಯಶಸ್ವಿಯಾಗಿದೆ. 'ಭಾರತದಲ್ಲಿ ತಯಾರಿಸಿ' ಅಭಿಯಾನ ಫಲ ನೀಡಿದ್ದು, ಸ್ಥಳೀಯವಾಗಿ ತಯಾರಾಗುವ ಐಫೋನ್ X R ಅನ್ನು ದೇಶಿ ಮಾರುಕಟ್ಟೆಗೆ ಪೂರೈಸಲಾಗುವುದು. ವಿದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಆ್ಯಪಲ್‌ನ ಪ್ರಮುಖ ಪೂರೈಕೆದಾರ ಸಾಲ್ಕಾಂಪ್, ಚೆನ್ನೈ ಬಳಿಯ ಪ್ಲಾಂಟ್ನಲ್ಲಿ 2,000 ಕೋಟಿ ರೂ. ಹೂಡಿಕೆ ಮಾಡಿದೆ. ಇಲ್ಲಿ ಚಾರ್ಜರ್‌ಗಳು ಮತ್ತು ಇತರ ಬಿಡಿ ಭಾಗಗಳನ್ನು ತಯಾರಿಸಲು ಸಾಲ್ಕಾಂಪ್ ಐದು ವರ್ಷಗಳ ಅವಧಿಗೆ ಇಷ್ಟೊಂದು ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಇದು 10,000 ಉದ್ಯೋಗಗಳನ್ನು ಸೃಷ್ಟಿಯಾಗಲಿವೆ ಎಂದರು.
ಆ್ಯಪಲ್‌ನ 'ಮೇಡ್ ಇನ್ ಇಂಡಿಯಾ' ಫೋನ್‌ಗಳು ವಾರ್ಷಿಕ 11,500 ಕೋಟಿ ರೂ.ನಷ್ಟು (1.6 ಬಿಲಿಯನ್ ಡಾಲರ್) ರಫ್ತಾಗಲಿವೆ. ದೇಶದಲ್ಲಿ ಮೊಬೈಲ್ ಫೋನ್ ಉತ್ಪಾದನೆಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳು ಶ್ಲಾಘನೀಯ. ಇದರಿಂದ ನೇರವಾಗಿ 10,000 ಉದ್ಯೋಗಗಳು ಸೃಷ್ಟಿಯಾದರೆ ಪರೋಕ್ಷವಾಗಿ 50 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು.