ಮುಂಬೈ: ತೀವ್ರ ಸಾಲದ ಸುಳಿಗೆ ಸಿಲುಕಿರುವ ರಿಲಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅನಿಲ್ ಅಂಬಾನಿ ಋಣಮುಕ್ತರಾಗಲು ಸುಮಾರು 21,700 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಲು ಮುಂದಾಗಿದ್ದಾರೆ.
ವಾರದ ಹಿಂದೆಯಷ್ಟೇ ಮುಂಬೈನ ಹೃದಯ ಭಾಗದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯನ್ನು ಮಾರಾಟಕ್ಕೆ ಅಥವಾ ದೀರ್ಘಾವಧಿ ಭೋಗ್ಯಕ್ಕೆ ನೀಡಲು ಅನಿಲ್ ಮುಂದಾಗಿದ್ದರು. ಇದಾದ ಬಳಿಕ 3.2 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧರಿಸಿದ್ದಾರೆ.
ಕಂಪನಿಯ ವಕ್ತಾರ ನೀಡಿದ ಮಾಹಿತಿ ಅನ್ವಯ, ರಿಲಾಯನ್ಸ್ ಇನ್ಫ್ರಾಸ್ಟ್ರಕ್ಷರ್ ತನ್ನ ಒಂಭತ್ತು ರಸ್ತೆ ಯೋಜನೆಗಳ ಮಾರಾಟ ಮುಖೇನ ₹ 9 ಸಾವಿರ ಕೋಟಿ, ರೆಡಿಯೋ ಘಟಕದ ಮೂಲಕ ₹ 1,200 ಕೋಟಿ ಹಾಗೂ ₹ 11,5000 ಕೋಟಿಯನ್ನು ಹಿಡುವಳಿ ಹಣಕಾಸು ಮುಖಾಂತರ ಸಂಗ್ರಹಿಸಿ ಸಾಲದ ಪ್ರಮಾಣ ತಗ್ಗಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಿಲಯನ್ಸ್ ಗ್ರೂಪ್ ಕಳೆದ 14 ತಿಂಗಳಲ್ಲಿ ₹ 35,000 ಕೋಟಿ ಸಾಲ ತೀರಿಸಿದೆ ಎಂದು ಅನಿಲ್ ಅಂಬಾನಿ ಜೂನ್ 11ರಂದು ಹೇಳಿದ್ದರು. ಆದರೂ ಸಾಕಷ್ಟು ಸಾಲ ಉಳಿದಿದ್ದು, ಈ ಗ್ರೂಪ್ನ ನಾಲ್ಕು ಕಂಪನಿಗಳಿಂದ ₹ 93,900 ಕೋಟಿ ಬಾಕಿ ಇದೆ ಎನ್ನಲಾಗಿದೆ.