ನವದೆಹಲಿ: ಕೆಲವು ದಿನಗಳ ಹಿಂದೆಯಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದ ಚೀನಾದ ಲೋನ್ ವುಲ್ಫ್(ಒಂಟಿ ತೋಳ) ಝಾಂಗ್ ಶನ್ಶನ್, ಈಗ ಬಫೆಟ್ ಅವರನ್ನು ಸರಿಸಿದ್ದಾರೆ.
ಝಾಂಗ್ ಶನ್ಶನ್ ಅವರು ಸಂಪತ್ತಿನ ಗಳಿಕೆಯಲ್ಲಿ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ವರ್ಷದ ಆರಂಭದಿಂದಲೂ ಝಾಂಗ್ ಅವರ ಸಂಪತ್ತು ವೃದ್ಧಿ ಆಗುತ್ತಿದ್ದು, 13.5 ಬಿಲಿಯನ್ ಡಾಲರ್ನಿಂದ. 91.7 ಬಿಲಿಯನ್‌ಗೆ ಏರಿಕೆ ಆಗಿದ್ದು ಈಗ ವಾರೆನ್ ಬಫೆಟ್‌ಗಿಂತ ಶ್ರೀಮಂತರಾಗಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ರೇಟ್ ಮತ್ತೆ ಜಂಪ್: ನಿದ್ದೆಗೆಡಿಸುವ ಮಟ್ಟಕ್ಕೆ ತಲುಪಲು ಒಂದೇ ಹೆಜ್ಜೆ ಬಾಕಿ
66 ವರ್ಷದ ಝಾಂಗ್ ಈಗ ಜಗತ್ತಿನ ಆರನೇ ಸಿರಿವಂತ ಉದ್ಯಮಿ. 2021ರ ಮೊದಲ ಎರಡು ವಹಿವಾಟು ದಿನಗಳಲ್ಲಿ ನಾಂಗ್‌ಫು ಷೇರು ಶೇ 18ರಷ್ಟು ಜಿಗಿದಿದ್ದು, ಸೆಪ್ಟೆಂಬರ್‌ನಿಂದ ಶೇ 200ರಷ್ಟು ಏರಿಕೆ ದಾಖಲಿಸಿವೆ.
ಚೀನಾದ ಪ್ರಜೆಯೊಬ್ಬರು ವಿಶ್ವದ ಅಗ್ರ 10 ಸ್ಥಾನಕ್ಕೆ ಪ್ರವೇಶಿಸಿದ ಎರಡನೇ ಉದ್ಯಮಿ ಎಂಬ ಹೆಗ್ಗಳಿಕೆಗೆ ಶನ್ಶನ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ವಾಂಗ್ ಜಿಯಾನ್ಲಿನ್ ಅವರು 2015ರಲ್ಲಿ 8ನೇ ಸ್ಥಾನ ಗಳಿಸಿದ್ದರು. 2012ರ ಬಳಿಕ ಬ್ಲೂಮ್‌ಬರ್ಗ್‌ನ ಸಂಪತ್ತು ಸೂಚ್ಯಂಕದಲ್ಲಿ ಇದಕ್ಕಿಂತ ಉನ್ನತ ಶ್ರೇಣಿ ಯಾರೂ ಗಳಿಸಿಲಿಲ್ಲ. ಆ ದಾಖಲೆಯನ್ನು ಶನ್ಶನ್ ಮುರಿದಿದ್ದಾರೆ.
ಝಾಂಗ್ ಕಳೆದ ವಾರ ಭಾರತದ ಮುಖೇಶ್ ಅಂಬಾನಿಯನ್ನು ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟದಿಂದ ಪದಚ್ಯುತಗೊಳಿಸಿದ್ದರು. 100 ಶತಕೋಟಿ ಡಾಲರ್ಗಿಂದ ಅಧಿಕ ಸಂಪತ್ತಿನೊಂದಿಗೆ 86.2 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯ ಬಫೆಟ್ ಅವರನ್ನು ಹಿಂದಿಕ್ಕಿದ್ದಾರೆ.