ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ (ರೆಪೊ) ಶೇ 0.25 ಅಂಶಗಳಷ್ಟು ಇಳಿಕೆ ಮಾಡಿದ್ದು, ಕಳೆದ ಒಂಬತ್ತು ವರ್ಷಗಳಲ್ಲಿ ಇದು ಕಡಿಮೆಯಾಗಿದೆ.
ಈ ಹಿಂದೆ ಶೇ 6ರಷ್ಟಿದ್ದ ಬಡ್ಡಿದರವನ್ನು 0.25ರಷ್ಟು ಕಡಿಮೆ ಮಾಡಿದ್ದು, ಪ್ರಸ್ತುತ ಬಡ್ಡಿದರ ಶೇ 5.75ಕ್ಕೆ ತಲುಪಿದೆ. ಆರ್ಬಿಐ ಬಡ್ಡಿದರ ಕಡಿಮೆ ಮಾಡಿರುವುದು ಈ ವರ್ಷದಲ್ಲಿ ಇದು ಮೂರನೇ ಬಾರಿ. 2010ರ ಜುಲೈನಲ್ಲಿ ಶೇ 5.75ರಷ್ಟು ಬಡ್ಡಿದರ ನಿಗದಿ ಆಗಿದ್ದು, 9 ವರ್ಷಗಳಲ್ಲಿನ ಕನಿಷ್ಠ ದರವಾಗಿದೆ.
ಆರ್ಥಿಕ ಬೆಳವಣಿಗೆಗೆ ವೇಗ ನೀಡುವ ಉದ್ದೇಶದಿಂದ ರೆಪೊ ದರ ಇಳಿಕೆ ಮಾಡಲಾಗಿದೆ. ಇದರಿಂದ ಗೃಹಸಾಲ ಸೇರಿದಂತೆ ಇತರ ಉದ್ದೇಶಗಳ ಸಾಲಗಳ ಬಡ್ಡಿಯಲ್ಲಿ ಮತ್ತಷ್ಟು ಇಳಿಮುಖವಾಗಲಿದೆ. ಠೇವಣಿಗಳ ಮೇಲಿನ ಬಡ್ಡಿದರ ಇಳಿಕೆ ಆಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಹಣಕಾಸು ನೀತಿ ಸಮಿತಿಯ ಸಭೆಯ ಬಳಿಕ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಬಡ್ಡಿದರದಲ್ಲಿ ಇಳಿಕೆ ಮಾಡಲಾಗಿದೆ. ಆರ್ಬಿಐ ತನ್ನ ಆರ್ಥಿಕತೆ ವೃದ್ಧಿಪಡಿಸಲು ಅನೇಕ ಸುಧಾರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭವಿಷ್ಯದ ಹಣಕಾಸು ನೀತಿಯ ವಿತ್ತೀಯ ಪ್ರಗತಿಗೆ ಪ್ರೋತ್ಸಾಹ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಇಂದಿನಿಂದ ಬ್ಯಾಂಕ್ ತನ್ನ ಗ್ರಾಹಕರ ಗೃಹ ಸಾಲದ ಮೇಲೆ ಬಡ್ಡಿದರ ಇಳಿಕೆ ಮಾಡಿದರೆ ಯಾವ ರೀತಿಯ ಪ್ರಯೋಜನ ಆಗಲಿದೆ ಎಂಬುದರ ಉದಾಹರಣೆ:
ಸಾಲದ ಮೊತ್ತ (₹) | 30,00,000 |
ಅವಧಿ (ವರ್ಷ) | 20 |
ಪ್ರಸ್ತುತ ಬಡ್ಡಿದರ (ಶೇ) | 8.60 |
ಪ್ರಸ್ತುತ ಇಎಂಐ (₹) | 26,225 |
ನೂತನ ಬಡ್ಡಿದರ(ಶೇ) | 8.35 |
ನೂತನ ಇಎಂಐ (₹) | 25,751 |