ನ್ಯೂಯಾರ್ಕ್: ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಆದಷ್ಟು ಬೇಗ ಭಾರತವನ್ನು ತೊರೆಯುವಂತೆ ಹೇಳಿದೆ.
4ನೇ ಹಂತದ ಪ್ರಯಾಣ ಸಲಹೆಯಲ್ಲಿ ಸರ್ಕಾರ ಹೊರಡಿಸಿದ ಪ್ರಕಟಣೆಯಲ್ಲಿ ಯುಎಸ್ ನಾಗರಿಕರಿಗೆ ಈ ವಿಷಯ ಪ್ರಸ್ತಾಪಿಸಲಾಗಿದೆ. ಭಾರತಕ್ಕೆ ಪ್ರಯಾಣಿಸಬೇಡಿ ಅಥವಾ ಸುರಕ್ಷಿತವಾಗಿರದೇ ಇದ್ದಲ್ಲಿ ಹೊರಹೋಗಬಾರದು ಎಂದಿದೆ. ಭಾರತ ಮತ್ತು ಅಮೆರಿಕದ ನಡುವೆ ನಿತ್ಯ 14 ನೇರ ವಿಮಾನಗಳು ಹಾರಾಡಲಿವೆ. ಯುರೋಪ್ ಮೂಲಕ ಸಂಪರ್ಕಿಸುವ ಇತರ ಸೇವೆಗಳು ಕೂಡ ಒದಗಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ದಾಖಲೆಯ ಕೋವಿಡ್ -19 ಸೋಂಕುಗಳು ಮತ್ತು ಸಾವಿನ ಪ್ರಮಾಣ ನಿಭಾಯಿಸಲು ಭಾರತೀಯ ಅಧಿಕಾರಿಗಳು ಮತ್ತು ಆಸ್ಪತ್ರೆಗಳು ಹೆಣಗಾಡುತ್ತಿವೆ. ಹಿಂದಿನ 24 ಗಂಟೆಗಳಲ್ಲಿ ಹೊಸ ಸೋಂಕಿತರ ಸಂಖ್ಯೆ 3,60,960 ಏರಿಕೆಯಾಗಿದೆ. 3,293 ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಕರಣಗಳ ರಾಷ್ಟ್ರವಾಗಿದೆ ಎಂದು ಅಮೆರಿಕ ಹೇಳಿದೆ.